ಜಿಲ್ಲೆ

ವೈದ್ಯಕೀಯ ಸೇವೆಗಷ್ಟೇ ಆಕ್ಸಿಜನ್ ಪೂರೈಸಿ

ಧಾರವಾಡ: ಇಲ್ಲಿನ ಸತ್ತೂರಿನ ಕರ್ನಾಟಕ ಇಂಡಸ್ಟ್ರಿಯಲ್ ಗ್ಯಾಸ್ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ ಹಾಗೂ ಹಿರಿಯ ಅಧಿಕಾರಿಗಳ ತಂಡ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮೊದಲು ಗ್ಯಾಸ್ ಪ್ರೖೆ.ಲಿಂ.ಗೆ ಭೇಟಿ ನೀಡಿದ ಸಚಿವರು, ಜಿಲ್ಲೆಯಲ್ಲಿ ಕೈಗಾರಿಕಾ ಘಟಕಗಳಿಗೆ ಆಕ್ಸಿಜನ್ ಪೂರೈಸುವ ಘಟಕಗಳು ಮುಂದಿನ ಆದೇಶದವರೆಗೂ ವೈದ್ಯಕೀಯ ಸೇವೆಗಳಿಗೆ ಮಾತ್ರ ಆಕ್ಸಿಜನ್ ಪೂರೈಸಬೇಕು ಎಂದು ಸೂಚಿಸಿದರು. ಜಿಲ್ಲೆಗೆ ಆಕ್ಸಿಜನ್ ಪೂರೈಸುವ ಬಳ್ಳಾರಿಯ ಜಿಂದಾಲ್ ಉಕ್ಕು ಕಾರ್ಖಾನೆ ಅಧಿಕಾರಿಗಳೊಂದಿಗೆ ಮಾತನಾಡಿ, ಆಕ್ಸಿಜನ್ ಪೂರೈಸುವಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಕರ್ನಾಟಕ ಇಂಡಸ್ಟ್ರಿಯಲ್ ಗ್ಯಾಸ್ ಸಂಸ್ಥೆಯ ರವೀಂದ್ರ ಓದುಗೌಡ್ರ ಮಾತನಾಡಿ, ಸರ್ಕಾರ ಮತ್ತು ಜಿಲ್ಲಾಡಳಿತದ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಆಕ್ಸಿಜನ್ ಪೂರೈಸಲಾಗುವುದು ಎಂದರು.

ಬಳಿಕ ಎಸ್​ಡಿಎಂ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಕೋವಿಡ್ ಚಿಕಿತ್ಸೆಗೆ ಎಲ್ಲರ ಸಹಕಾರ ಅಗತ್ಯ. ಮೆಡಿಕಲ್ ಕಾಲೇಜು ಹೊಂದಿರುವ ಎಸ್​ಡಿಎಂ ಆಸ್ಪತ್ರೆಯು ಕನಿಷ್ಠ 500 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ, ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ್ ತಹಸೀಲ್ದಾರರಾದ ಶಶಿಧರ ಮಾಡ್ಯಾಳ, ಡಾ. ಸಂತೋಷಕುಮಾರ ಬಿರಾದಾರ, ಸಹಾಯಕ ಔಷಧ ನಿಯಂತ್ರಕ ಕೆ.ಎಸ್. ಮಲ್ಲಿಕಾರ್ಜುನ, ಇತರರು ಇದ್ದರು.

ಕರೊನಾ ತಡೆಗೆ ಸಕಲ ಸಿದ್ಧತೆ

ದೇಶ, ರಾಜ್ಯದಲ್ಲಿ ಕರೊನಾ 2ನೇ ಅಲೆ ವೇಗವಾಗಿ ಹರಡುತ್ತಿದೆ. ಅದನ್ನು ತಡೆಯಲು ಸರ್ಕಾರಗಳು ಯುದ್ಧೋಪಾದಿಯಲ್ಲಿ ಸಕಲ ಸಿದ್ಧತೆ ಮಾಡುತ್ತಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಲ್ಲ ರೀತಿಯ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ರಾಜ್ಯಕ್ಕೆ 800 ಮೆಟ್ರಿಕ್ ಟನ್ ಆಕ್ಸಿಜನ್ ಹಾಗೂ ರೆಮ್​ಸಿವಿರ್ ಔಷಧವನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡಲು ಕೇಂದ್ರ ಸರ್ಕಾರ ಒಪ್ಪಿದೆ’ ಎಂದರು.

ಎಸ್​ಡಿಎಂ ಆಸ್ಪತ್ರೆಯಲ್ಲಿ ಬೆಡ್​ಗಳನ್ನು ನೀಡುವಂತೆ ವೀರೇಂದ್ರ ಹೆಗ್ಗಡೆ ಅವರಿಗೆ ಕೇಳಿಕೊಳ್ಳಲಾಗಿತ್ತು. ಅವರು ಆಯುಷ್ಮಾನ್ ಭಾರತ ಯೋಜನೆಯಡಿ ಸುಮಾರು 500 ಬೆಡ್ ನೀಡುವ ಭರವಸೆ ನೀಡಿದ್ದಾರೆ. ರಾಜ್ಯ ಸೇರಿ ಜಿಲ್ಲೆಗೆ ಬಳ್ಳಾರಿಯಿಂದ ಆಕ್ಸಿಜನ್ ದೊರೆಯುತ್ತಿದೆ. ಅದರಲ್ಲಿ ಯಾವುದೇ ಕೊರತೆ ಇಲ್ಲ. ಜನರು ಭಯಪಡುವ ಅವಶ್ಯಕತೆ ಇಲ್ಲ. ಆದರೆ, ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಸಚಿವ ಸಂಪುಟ ಸಭೆಯಲ್ಲಿ ಮುಂದಿನ ನಿರ್ಧಾರ

ಕೋವಿಡ್ 2ನೇ ಅಲೆ ನಿಯಂತ್ರಿಸಲು ಸರ್ಕಾರ ಹೊರಡಿಸಿರುವ ವಾರಾಂತ್ಯ ಕರ್ಫ್ಯೂ ಹಾಗೂ ಕಠಿಣ ನಿರ್ಬಂಧಗಳು ಪ್ರಸ್ತುತ ಮೇ 4ರವರೆಗೆ ಜಾರಿಯಲ್ಲಿರಲಿವೆ. ಮುಂದಿನ ನಿರ್ಧಾರಗಳನ್ನು ಸೋಮವಾರ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಬಂಧಗಳನ್ನು ಉಳಿದ ದಿನಗಳಿಗೂ ವಿಸ್ತರಿಸಬೇಕೆ ಅಥವಾ ಬೇಡವೇ ಎಂಬುದರ ಸಾಧಕ-ಬಾಧಕಗಳನ್ನು ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ರ್ಚಚಿಸಿ ಮುಖ್ಯಮಂತ್ರಿ ನಿರ್ಣಯ ಕೈಗೊಳ್ಳುತ್ತಾರೆ ಎಂದರು.