ಜಿಲ್ಲೆ

ವೈದ್ಯಕೀಯ ಸೀಟು ಪಡೆದ ಗ್ರಾಮೀಣ ಪ್ರತಿಭೆ

ಗಂಧನಹಳ್ಳಿ: ಕನ್ನಡ ಮಾಧ್ಯಮದ ವಿದ್ಯಾರ್ಥಿನಿ, ಸಾಲಿಗ್ರಾಮ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಕೆ.ಸಹನಾ ನೀಟ್ ಪರೀಕ್ಷೆ ತೇರ್ಗಡೆಯಾಗಿ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು ಪಡೆದುಕೊಂಡಿದ್ದಾರೆ.


ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ, ನಗರ ಪ್ರದೇಶಗಳಲ್ಲಿ ಓದಿಸಬೇಕು. ಆ ಮೂಲಕ ಉನ್ನತ ಶಿಕ್ಷಣ ಕೊಡಿಸಬೇಕೆಂಬುದು ಕನಸು ಸಾಮಾನ್ಯ. ಆದರೆ ಕಾಳೇಗೌಡ-ಕುಮಾರಿ ಅವರ ಪುತ್ರಿ ಸಹನಾ ನೀಟ್ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕ್ ಪಡೆದು ವೈದ್ಯಕೀಯ ಸೀಟು ಪಡೆಯುವ ಮೂಲಕ ಓದಲು ಮಾಧ್ಯಮ ಮುಖ್ಯವಲ್ಲ, ಗುರಿ ಅಷ್ಟೇ ಮುಖ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಕಾಳಮ್ಮನಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಸಹನಾ, ಪಿಯು ಶಿಕ್ಷಣವನ್ನು ಕೆ.ಆರ್.ನಗರ ಪಟ್ಟಣದಲ್ಲಿರುವ ಬ್ರೆಟ್ ಪಿಯು ಕಾಲೇಜಿನಲ್ಲಿ ಪೂರೈಸಿ, ಮೈಸೂರಿನ ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸಿದ್ದರು. ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ವೈದ್ಯಕೀಯ ಶಿಕ್ಷಣಕ್ಕೆ ಸೇರಿದ ಗ್ರಾಮದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾರೆ.


ತಮಗೆ ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಹಾಗೂ ಬೇರೊಬ್ಬರ ಜಮೀನುಗಳಲ್ಲಿ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡಕುಟುಂಬ ಮಗಳಿಗೆ ಇಲ್ಲಿವರೆಗೆ ಉತ್ತಮ ಶಿಕ್ಷಣ ಕೊಡಿಸಿದೆ. ಸಹನಾಗೆ ಸದ್ಯ ವೈದ್ಯಕೀಯ ಸೀಟು ಸಿಕ್ಕಿದೆ. ಆದರೆ ವ್ಯಾಸಂಗಕ್ಕೆ ಆರ್ಥಿಕ ತೊಂದರೆಯಾಗಿದೆ. ಸಹನಾಳ ವಿದ್ಯಾಭ್ಯಾಸಕ್ಕೆ ದಾನಿಗಳು ನೆರವಾಗುವ ಮೂಲಕ ಆಕೆಯ ಭವಿಷ್ಯಕ್ಕೆ ದಾರಿದೀಪವಾಗಬೇಕಿದೆ.