ಬಾಗಲಕೋಟೆ ನಗರದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನ್ಯೂರೊ-ಅಕ್ಸಿಸ್ ೨೦೨೪ ವೈದ್ಯಕೀಯ ಸಮ್ಮೇಳನ ಖ್ಯಾತ ನರರೋಗ ತಜ್ಞ ಡಾ.ಅನಿಲ್ ರಾಮಕೃಷ್ಣ ಉದ್ಘಾಟಿಸಿದರು. 
ಜಿಲ್ಲೆ

ವೈದ್ಯಕೀಯ ವೃತ್ತಿಗೆ ಅನ್ವೇಷಣೆ ಅಗತ್ಯ

ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅವಿಷ್ಕಾರಗಳಾಗುತ್ತಿದ್ದು, ಈ ವೃತ್ತಿಯಲ್ಲಿ ಪರಿಣಿತಿ ಸಾಧಿಸಲು ವೈದ್ಯರಲ್ಲಿ ಅನ್ವೇಷಣಾ ಮತ್ತು ನಿರಂತರ ಕಲಿಕಾ ಮನೋಭಾವ ಅಗತ್ಯವಾಗಿದೆ ಎಂದು ಖ್ಯಾತ ನರರೋಗ ತಜ್ಞ ಡಾ.ಅನಿಲ್ ರಾಮಕೃಷ್ಣ ಹೇಳಿದರು.

ನಗರದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಜನರಲ್ ಮೆಡಿಸಿನ್ ವಿಭಾಗ ಮತ್ತು ಅಖಿಲ ಭಾರತೀಯ ವೈದ್ಯರ ಸಂಘ ಬಾಗಲಕೋಟೆ ಘಟಕದ ಆಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ನ್ಯೂರೊ-ಅಕ್ಸಿಸ್ ೨೦೨೪ ವೈದ್ಯಕೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ರೋಗಿಗಳ ಚಿಕಿತ್ಸೆಯ ದೃಷ್ಟಿಯಿಂದ ವೈದ್ಯರು ಪರಿಣಿತಿ ಹೊಂದುವುದು ಅಗತ್ಯವಾಗಿದೆ ಎಂದರು.

ರೋಗಪತ್ತೆ ಮತ್ತು ಚಿಕಿತ್ಸೆಯ ಕಾರ್ಯಕ್ಕೆ ಆಧುನಿಕತೆಯ ಸ್ಪರ್ಷ ನೀಡಬೇಕು. ಸಮ್ಮೇಳನಗಳು ವೈದ್ಯರಿಗೆ ತಮ್ಮ ಕ್ಷೇತ್ರದಲ್ಲಿ ನಿರಂತರ ಶಿಕ್ಷಣ ಪಡೆಯಲು ನೆರವಾಗುತ್ತವೆ. ಸದ್ಯದ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿನ ಹೊಸ ಅವಿಷ್ಕಾರಗಳಿಗನುಗುಣವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಜ್ಞಾನ ಪಡೆಯಲು ವೈದ್ಯರಿಗೆ ಇಂತಹ ಸಮ್ಮೇಳನಗಳು ಹಾಗೂ ನಿರಂತರ ಶಿಕ್ಷಣದಂತಹ ಕಾರ್ಯಕ್ರಮಗಳು ನೆರವಾಗುತ್ತಿವೆ ಎಂದು ತಿಳಿಸಿದರು.

ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ ಮಾತನಾಡಿ, ಸಮಾಜದಲ್ಲಿ ವೈದ್ಯರ ಜವಾಬ್ದಾರಿ ಹೆಚ್ಚಿದೆ. ರೋಗಿಗಳ ರೋಗಪತ್ತೆ ಮತ್ತು ಚಿಕಿತ್ಸಾ ಸಂದರ್ಭ ವೈದ್ಯರಿಗೆ ಕೆಲಸದಲ್ಲಿ ಬದ್ಧತೆ ಇರಲಿ. ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದರ ಮೂಲಕ ವೈದ್ಯರು ತಮ್ಮ ವಿಷಯ ಸಂಬಂಧಿತ ಹೆಚ್ಚಿನ ಜ್ಞಾನ ಹಾಗೂ ಕೌಶಲವನ್ನು ಪಡೆಯುವಂತಾಗಲಿ. ಸಮ್ಮೇಳನದಲ್ಲಿನ ಚರ್ಚೆ ಮತ್ತು ಸಂವಾದ ಹೊಸ ವಿಷಯಗಳ ಅವಿಷ್ಕಾರಕ್ಕೆ ಕಾರಣವಾಗಲಿ ಎಂದು ಹೇಳಿದರು.

ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ (ಬೇವೂರ), ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ವೈದ್ಯರಾದ ಡಾ.ದೇವರಡ್ಡಿ ನಾವಳ್ಳಿ ಮತ್ತು ಡಾ.ಶಿವಕುಮಾರ ಮಾಸರಡ್ಡಿ ಉಪಸ್ಥಿತರಿದ್ದರು. ಸಂಘಟನಾ ಕಾರ್ಯಾಧ್ಯಕ್ಷ ಡಾ.ಗೋಪಾಲ ಬಜಾಜ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಕೃತಿಕಾ ಮೊರಪ್ಪನವರ ವಂದಿಸಿದರು.