ಜಿಲ್ಲೆ

ವೈದ್ಯಕೀಯ ಪರೀಕ್ಷೆಗೆ ನಕಾರ!, ಮುಚ್ಚಿಹೋಗುತ್ತಿವೆ ಮಹಿಳಾ ದೌರ್ಜನ್ಯ ಪ್ರಕರಣ, ಕಾನೂನೇ ಅಡ್ಡಿ ಕೈಚೆಲ್ಲುವ ಸಖಿ ಸಿಬ್ಬಂದಿ

Bengaluru Rural

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಮುಚ್ಚಿಹೋಗುತ್ತಿವೆ. ಪೋಕ್ಸೋ ಕಾಯ್ದೆಯಡಿ ದಾಖಲಾದ ಹಲವು ಪ್ರಕರಣಗಳಲ್ಲಿ ಅಪರಾಧಿಗಳು ಶಿಕ್ಷೆಯಿಂದ ಬಚಾವಾಗುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ನೆರವಿಗಾಗಿ ಕಾರ್ಯಾರಂಭ ಮಾಡಿರುವ ಸಖಿ ಕೇಂದ್ರದ ಸಿಬ್ಬಂದಿಯೂ ಕೈಚೆಲ್ಲುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಸಂತ್ರಸ್ತೆ ವೈದ್ಯಕೀಯ ಪರೀಕ್ಷೆಗೆ ಹಿಂದೇಟು ಹಾಕುತ್ತಿರುವುದು..!

ಹೌದು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಲ್ಲಿ ಆರೋಗ್ಯ, ವಸತಿ, ಕಾನೂನು ಮತ್ತು ಪೊಲೀಸ್ ನೆರವು, ಆಪ್ತ ಸಮಾಲೋಚನೆ ನಡೆಸುವ ಸಖಿ ಒನ್ ಸ್ಟಾಪ್ ಸೆಂಟರ್‌ಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆರಂಭಿಸಲಾಗಿದೆ. ಆದರೆ ಬಲವಂತವಾಗಿ ವೈದ್ಯಕೀಯ ಪರೀಕ್ಷೆಗೊಳಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕೆ ಸಖಿ ಕೇಂದ್ರದ ಸಿಬ್ಬಂದಿಯೂ ಇಂಥ ಪ್ರಕರಣಗಳಲ್ಲಿ ಕೈಚೆಲ್ಲುವಂತಾಗಿದೆ.

ನುಣುಚಿಕೊಳ್ಳುವ ಅಪಾಯ: ಕೇಂದ್ರದ ಆಶ್ರಯಕ್ಕೆ ಬರುವ ಹೆಣ್ಣುಮಕ್ಕಳ ಸಂಬಂಧ ಮಹಿಳಾ ಠಾಣೆಗಳಿಗೆ ದೂರು ನೀಡಿದರೂ ತಕ್ಷಣ ಎ್ಐಆರ್ ದಾಖಲಿಸಲು ಕಾನೂನು ತೊಡಕು ಎದುರಾಗಿದೆ. ಮೊದಲಿಗೆ ಎನ್‌ಸಿಆರ್ ಮಾಡಿ ಆಪ್ತ ಸಮಾಲೋಚನೆ ನಡೆಸುವಂತೆ ಪೊಲೀಸರಿಂದ ಸಲಹೆ ಬರುತ್ತಿದೆ ಎನ್ನಲಾಗಿದೆ. ಏತನ್ಮಧ್ಯೆ ಆರೋಪಿಗಳು ಪ್ರಭಾವ ಬೀರಿಯೋ ಅಥವಾ ಸಂತ್ರಸ್ತೆ ಕುಟುಂಬಕ್ಕೆ ಆಮಿಷ ತೋರಿಸಿಯೋ ಪ್ರಕರಣದಿಂದ ಬಚಾವಾಗಲು ಯತ್ನಿಸುತ್ತಿದ್ದಾರೆ. ಸಖಿ ಕೇಂದ್ರದಲ್ಲಿ 5 ದಿನಗಳ ಮಟ್ಟಿಗಷ್ಟೆ ಸಂತ್ರಸ್ತರನ್ನು ಉಳಿಸಿಕೊಳ್ಳಲು ಅವಕಾಶ ಇರುವುದರಿಂದ ಅಷ್ಟು ಕಾಲಾವಧಿಯಲ್ಲಿ ಎಲ್ಲ ಪ್ರಕ್ರಿಯೆ ಪೂರೈಸುವುದು ಕಷ್ಟಸಾಧ್ಯ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಬಡತನವೇ ಬಂಡವಾಳ: ಗ್ರಾಮೀಣ ಭಾಗಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಬಡ ಕುಟುಂಬದ ಹೆಣ್ಣುಮಕ್ಕಳೇ ಬಲಿಯಾಗುತ್ತಿದ್ದಾರೆ. 2021-22ನೇ ಸಾಲಿನಲ್ಲಿ ರಾಜ್ಯಾದ್ಯಂತ 2,742 ಹೆಣ್ಣುಮಕ್ಕಳಿಗೆ ಸಖಿ ಕೇಂದ್ರ ಆಸರೆ ಒದಗಿಸಿದೆ. ಇದರಲ್ಲಿ ಶೇ.98 ಸಂತ್ರಸ್ತೆಯರು ಬಡ ಕುಟುಂಬದವರು ಎಂಬುದು ಗಮನಾರ್ಹ. ಕೇಂದ್ರದಲ್ಲಿ ಕೌಟುಂಬಿಕ ದೌರ್ಜನ್ಯ, ಆಸಿಡ್ ದಾಳಿ, ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳದಂಥ ಪ್ರಕರಣಗಳ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಾಚಾರ ಪ್ರಕರಣ, ಲೈಂಗಿಕ ದೌರ್ಜನ್ಯಕ್ಕೊಳಗಾದ ಪ್ರಕರಣಗಳು ದಾಖಲಾಗುತ್ತಿವೆ.

ಕೌಟುಂಬಿಕ ದೌರ್ಜನ್ಯ, ಬಾಲ್ಯವಿವಾಹ, ಕಾಣೆಯಾದ ಪ್ರಕರಣ, ಮಕ್ಕಳ ಮೇಲಿನ ದೌರ್ಜನ್ಯ ಮತ್ತಿತರ ಪ್ರಕರಣಗಳ ಸಂತ್ರಸ್ತೆಯರಿಗೆ ಸಖಿ ಕೇಂದ್ರ ಆಸರೆಯಾಗಿದೆ. ಇಂಥ ಪ್ರಕರಣಗಳಲ್ಲಿ ಪರಿಹಾರದ ಜತೆಗೆ ಸಂಬಂಧಪಟ್ಟವರಿಗೆ ಶಿಕ್ಷೆಯೂ ಆಗುತ್ತದೆ. ಆದರೆ ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳಲ್ಲಿ ಸಂತ್ರಸ್ತೆಯರಿಗೆ ನ್ಯಾಯದೊರಕಿಸಿಕೊಡುವುದು ಕಷ್ಟಸಾಧ್ಯವಾಗಿದೆ. ಸುಮಾಪಾಟೀಲ್, ಸಖಿ ಕೇಂದ್ರ ಆಡಳಿತಾಧಿಕಾರಿ ದೊಡ್ಡಬಳ್ಳಾಪುರ