ಮೈಸೂರು: ಮೈಸೂರು ನಗರ ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಕಾರಣ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಬಣ್ಣಿಸಿದರು.
ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಅಲ್ಯುಮಿನಿ ಅಸೋಸಿಯೇಷನ್‌ನಿಂದ ಜೆ.ಕೆ.ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ‘ಮಾ ಉತ್ಸವ-2023’ರಲ್ಲಿ ಎಂಎಂಸಿಆರ್‌ಐನ ಹಿರಿಯ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಮಾತನಾಡಿದರು.
ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಿರುವ ನೂರಾರು ವೈದ್ಯರು ಪ್ರಪಂಚದೆಲ್ಲೆಡೆ ಸೇವೆ ಸಲ್ಲಿಸುತ್ತಿದ್ದಾರೆ. ದೇಶದ ಅಭಿವೃದ್ಧಿಯ ಕೇಂದ್ರ ಭಾಗವಾದ ವೈದ್ಯಕೀಯ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಕೋವಿಡ್ ಸಮಯದಲ್ಲಿ ವೈದ್ಯರು ನೀಡಿದ ಸೇವೆ ಅನನ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ನಗರ ದೇಶದಲ್ಲಿಯೇ ಅತ್ಯುನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಸಾಂಪ್ರದಾಯಿಕ ಹಾಗೂ ಉನ್ನತ ಶಿಕ್ಷಣ ನೀಡುವಲ್ಲಿ ಅಪಾರ ಕೊಡುಗೆ ನೀಡುತ್ತಿದೆ. ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಫಲ ಎಂದು ಶ್ಲಾಘಿಸಿದರು.
ಹಿರಿಯ ವೈದ್ಯರಿಗೆ ಸನ್ಮಾನ: ಹಿರಿಯ ವೈದ್ಯರಾದ ಡಾ.ಬೃಂದಾದೇವಿ, ಡಾ.ಚಂದ್ರಶೇಖರ್, ಡಾ.ಹನುಮಕ್ಕ, ಡಾ.ಇಂದಿರಾರಾವ್, ಡಾ.ಕಮಲಮ್ಮ, ಡಾ.ಕನಕಲತಾ ಸುಂದರೇಶ್, ಡಾ.ಲಿಂಗಮ್ಮ, ಡಾ.ಕೆ.ಎನ್.ಮೋಹನ್, ಡಾ.ಎಂ.ಎಸ್.ಪ್ರಸನ್ನಕುಮಾರ್, ಡಾ.ಎಚ್.ಎಸ್.ರುದ್ರೇಶ್, ಡಾ.ಸಚ್ಚಿದಾನಂದ, ಡಾ.ಸಿ.ಕೆ.ಶಾಸ್ತ್ರಿ, ಡಾ.ಎಸ್.ಪಿ.ಶ್ರೀನಿವಾಸ್, ಡಾ.ಶಿವಮಾದು, ಡಾ.ಸುಂದರೇಶನ್, ಡಾ.ಉದಯ್ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಅಲ್ಯುಮಿನಿ ಅಸೋಸೊಯೇಷನ್ ಗೌರವಾಧ್ಯಕ್ಷ ಡಾ.ಬಿ.ಡಿ.ಗಣಪತಿ, ಅಧ್ಯಕ್ಷ ಡಾ.ಎಸ್.ಚಂದ್ರಶೇಖರ್, ಮಾ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎ.ಶೇಖರ್, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ, ಮಾ ಕಾರ್ಯದರ್ಶಿ ಡಾ.ಎಚ್.ಬಿ.ಶಶಿಧರ್, ಖಜಾಂಚಿ ಡಾ.ಎ.ಎಸ್.ಸರ್ವೇಶ್ ರಾಜೇ ಅರಸ್ ಇತರರು ಇದ್ದರು.