ಜಿಲ್ಲೆ

ವೈದ್ಯ ಸೀಟು ಹಂಚಿಕೆಗೆ ಕೇಂದ್ರ ಬ್ರೇಕ್

ಕಲಬುರಗಿ: ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೀಟು ಹೆಚ್ಚಳ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಕಡಿವಾಣ ಹಾಕುವ ಮೂಲಕ ದಕ್ಷಿಣ ರಾಜ್ಯಗಳಿಗೆ ಭಾರಿ ಹೊಡೆತ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಕಟ್ಟಡದಲ್ಲಿ ಶನಿವಾರ ರುಮಾಟಲಜಿಸ್ಟ್ ರಾಜ್ಯ ಸಮಾವೇಶ (ಕ್ರಾÈಕಾನ್-೨೦೨೩) ಉದ್ಘಾಟಿಸಿ ಮಾತನಾಡಿದ ಅವರು , ೧೦ ಲಕ್ಷ ಜನಸಂಖ್ಯೆವರೆಗೆ ೧೦೦ ಮೆಡಿಕಲ್ ಸೀಟು ನಿಗದಿ ಮಾಡಿದೆ. ಯಾವುದೇ ಕಾರಣಕ್ಕೂ ಇದನ್ನು ಮೀರದಿರಲು ಸೂಚಿಸಿದೆ. ಜನಸಂಖ್ಯೆ ಆಧಾರದ ಮೇಲೆ ಮೆಡಿಕಲ್ ಸೀಟು ಹಂಚಿಕೆ ಒಳ್ಳೆಯ ಬೆಳವಣಿಗೆ ಅಲ್ಲ. ಈ ನಿರ್ಧಾರಕ್ಕೆ ವಿರೋಧಿಸುವ ಜತೆಗೆ ವಾಪಸ್ ಪಡೆಯುವಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.

ರಾಷ್ಟ್ರೀಯ ವೈದ್ಯಕೀಯ ಆಯೋಗ ರಾಜ್ಯ ಸರ್ಕಾರಕ್ಕೆ ಸುತ್ತೋಲೆ ಕಳುಹಿಸಿ ನಿರ್ಬಂಧದ ಬಗ್ಗೆ ವಿವರಿಸಿದೆ. ೨೦೧೮ನೇ ಸಾಲಿನಲ್ಲಿ ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಕಾಲೇಜು ಶುರು ಮಾಡಲಾಗಿದೆ. ರಾಜ್ಯದ ಇನ್ನೂ ೭-೮ ಜಿಲ್ಲೆಗಳಲ್ಲಿ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಕೇಂದ್ರದ ಈ ನಿರ್ಧಾರ ಎಲ್ಲದಕ್ಕೂ ಕಡಿವಾಣ ಹಾಕಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಲಬುರಗಿ ಜಯದೇವ ಆಸ್ಪತ್ರೆ ಬರುವ ಜನವರಿಯಲ್ಲಿ ಲೋಕಾರ್ಪಣೆಗೊಳಿಸಲು ತಯಾರಿ ನಡೆದಿವೆ. ಈ ಭಾಗಕ್ಕೆ ೩೭೧(ಜೆ) ವಿಶೇಷ ಸ್ಥಾನಮಾನ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಯಲ್ಲಿ ೩೭೧ಹಾಸಿಗೆ ಸಾಮರ್ಥ್ಯ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಇಂಡಿಯನ್ ರುಮಾಟಲಜಿಸ್ಟ್ ಅಸೋಷಿಯೇಷನ್ ಚೀಫ್ ಪ್ಯಾಟ್ರನ್ ಡಾ.ಕೆ.ಎಂ.ಮಹೇಂದ್ರನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ರುಮಾಟಲಜಿ ವಿಭಾಗ ರಾಜ್ಯದ ಎರಡು ಮೆಡಿಕಲ್ ಕಾಲೇಜುಗಳಲ್ಲಿ ಮಾತ್ರ ಲಭ್ಯವಿದೆ. ರಾಜ್ಯದ ಪ್ರತಿ ಮೆಡಿಕಲ್ ಕಾಲೇಜುಗಳಲ್ಲಿ ಈ ವಿಭಾಗ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವ ಡಾ.ಶರಣಪ್ರಕಾಶ, ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ಆದರೆ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಈ ವಿಭಾಗ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಕೆಬಿಎನ್ ವಿವಿ ಪ್ರೊಫೆಸರ್ ಡಾ.ಪಿ.ಎಸ್.ಶಂಕರ್, ಎಂ.ಆರ್.ಮೆಡಿಕಲ್ ಕಾಲೇಜಿನ ಜನರಲ್ ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ.ಭರತ್ ಕೋಣಿನ್, ಕಲಬುರಗಿ ಎಪಿಐ ಅಧ್ಯಕ್ಷ ಡಾ.ನಾಗರಾಜ ಕೋಥ್ಲಿ ಇತರರು ಮಾತನಾಡಿದರು. ಕ್ರಾಕಾನ್ ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ಜೀವಣಗಿ ವಂದಿಸಿದರು.

ಕರ್ನಾಟಕ ರುಮಾಟಲಜಿಸ್ಟ್ ಅಸೋಸಿಯೇಷನ್ ಅಧ್ಯಕ್ಷೆ ಡಾ.ವಿನೀತಾ ಶೋಭಾ, ಖಜಾಂಚಿ ಡಾ.ಶಿವಪ್ರಸಾದ್ ಬಿ.ಎನ್, ಕಲಬುರಗಿ ಅರ್ಥೋಪೆಡಿಕ್ ಸೊಸೈಟಿ ಅಧ್ಯಕ್ಷ ಡಾ.ಕಿಶೋರ ಮೇಂಗಜಿ, ಕ್ರಾÈಕಾನ್ ಸಂಘಟನಾ ಜಂಟಿ ಕಾರ್ಯದರ್ಶಿ ಡಾ.ರಾಹುಲ್ ಲಡ್ಡಾ, ಡಾ.ಶಿವಪುತ್ರಪ್ಪ ಘಂಟಿ, ಸಮಾವೇಶ ಸಂಘಟನಾ ಅಧ್ಯಕ್ಷ ಡಾ.ಎಸ್.ನಾಗರಾಜ್ ಇತರರು ಇದ್ದರು.