ಭಾಲ್ಕಿ: ನಮ್ಮಲ್ಲಿನ ಮೂಢನಂಬಿಕೆಗಳನ್ನು ತೊಡೆದು ಹಾಕುವ ಮೂಲಕ ವೈಜ್ಞಾನಿಕ ಮತ್ತು ವೈಚಾರಿಕವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಲಹೆ ನೀಡಿದರು.
ಇಲ್ಲಿಯ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಬಸವ ಪಂಚಮಿ ಮತ್ತು ಅಕ್ಕನಾಗಮ್ಮ ಜಯಂತಿ ನಿಮಿತ್ತ ಹಾನಗಲ್ ಕುಮಾರೇಶ್ವರ ವಸತಿನಿಲಯದ ವಿದ್ಯಾರ್ಥಿಗಳಿಗೆ ಹಾಲು ವಿತರಿಸಿದ ಅವರು, ಹಬ್ಬಗಳ ಹೆಸರಿನಲ್ಲಿ ಕಲ್ಲನಾಗರ, ಹುತ್ತಕ್ಕೆ ಹಾಲೆರೆಯದೆ ಬಡ ಮಕ್ಕಳು, ನಿರ್ಗತಿಕರು, ಹಿರಿಯರು, ರೋಗಿಗಳಿಗೆ ನೀಡಿದರೆ ಸಾರ್ಥಕವಾಗುತ್ತದೆ ಎಂದರು.
ಹಾವು ಹಾಲು ಕುಡಿಯುವುದಿಲ್ಲ ಎಂಬುದು ವೈಜ್ಞಾನಿಕ ಸತ್ಯ. ಸಮಾಜದಲ್ಲಿ ಬಹಳಷ್ಟು ಬಡ ಜನರಿಗೆ ಕುಡಿಯಲು ಹಾಲು ಸಿಗುತ್ತಿಲ್ಲ. ಅನೇಕ ಮಕ್ಕಳು ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿವೆ. ಮಕ್ಕಳು, ವಯೋವೃದ್ಧರು, ರೋಗಿಗಳು, ಬಡವರು, ನಿರ್ಗತಿಕರಿಗೆ ಹಾಲನ್ನು ನೀಡಿ ಮಾನವರಲ್ಲಿ ನಿಜವಾದ ದೇವರು ಕಾಣಬೇಕು ಎಂದು ಉಪದೇಶಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಪ್ರಮುಖರಾದ ಸಂಗಮೇಶ ವಾಲೆ, ಸುನೀಲ ಹೊನ್ನಾಳೆ, ಬಾಬುರಾವ ಹುಣಜೆ, ಬಾಬು ಬೆಲ್ದಾಳ, ಮಲ್ಲಮ್ಮ ನಾಗನಕೇರೆ, ಕೀರ್ತಿ ಶಶಿಧರ ಇತರರಿದ್ದರು.