ಮದ್ದೂರು: ಜಗತ್ತು ವೈಜ್ಞಾನಿಕ, ತಾಂತ್ರಿಕವಾಗಿ ಎಷ್ಟೇ ವೇಗವಾಗಿ ಮುಂದುವರಿದರೂ ಪ್ರತಿಯೊಬ್ಬರೂ ದೇವರ ಮೇಲಿನ ಭಕ್ತಿ ಹಾಗೂ ಗುರು ಹಿರಿಯರಿಗೆ ನೀಡುವ ಗೌರವವನ್ನು ಎಂದು ಮರೆಯಬಾರದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಸೋಮವಾರ ಶ್ರೀ ಬಸವೇಶ್ವರಸ್ವಾಮಿ ನೂತನ ದೇವಸ್ಥಾನ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕಳಸಾರೋಹಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹಿಂದಿಗಿಂತಲೂ ಎಲ್ಲ ಸವಲತ್ತುಗಳು ಎಲ್ಲರಿಗೂ ಸಿಗುತ್ತಿದೆ. ಇದನ್ನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಅಭಿವೃದ್ಧಿಯತ್ತ ದಾಪುಗಾಲು ಹಾಕಬೇಕು ಎಂದು ಸಲಹೆ ನೀಡಿದರು.
ಜಗತ್ತು ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಬೆಳೆಯಲಿದೆ. ಪ್ರಸ್ತುತ ಇರುವ ಮೊಬೈಲ್, ಕಂಪ್ಯೂಟರ್‌ಗಳಿಗಿಂತಲೂ ಉತ್ತಮವಾದ ಸಾಧನಗಳು ತಯಾರಾಗಲಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸುವ ಜ್ಞಾನವನ್ನು ನಾವು ಪಡೆದುಕೊಳ್ಳಬೇಕಿದೆ. ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೇ ಉತ್ತಮ ವ್ಯಾಸಂಗ ನೀಡುವ ಜತೆಗೆ ಸಂಸ್ಕಾರ, ಆಚಾರ, ವಿಚಾರಗಳನ್ನು ತಿಳಿಸಿಕೊಡುವ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದರು.
ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಿಸುವುದರಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆ ಭಾವನೆ ಮೂಡುತ್ತದೆ. ದೇವಾಲಯದ ಮುಂದೆ ತೆಂಗಿನಕಾಯಿ ಒಡೆದಂತೆ, ನಮ್ಮಲ್ಲಿರುವ ಅಹಂಕಾರ ಹೋಗುವಂತೆ ನೋಡಿಕೊಳ್ಳಬೇಕು ಎಂದರು.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ದೇವರ ದಯೆಯಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಹಾಗೂ ರಾಜ್ಯದ ಜನರಿಗೆ ಅನುಕೂಲವಾಗಲಿ ಎಂದು ಪ್ರಾರ್ಥಿಸುತ್ತೇನೆ. ರಾಜಕೀಯವನ್ನು ಚುನಾವಣಾ ಸಂದರ್ಭದಲ್ಲಿ ಮಾತ್ರ ಮಾಡಬೇಕು. ಉಳಿದಂತೆ ಎಲ್ಲರೂ ಒಗ್ಗೂಡಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಆಗ ಮಾತ್ರ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯುವ ಜನಾಂಗ ಮತ್ತು ಗ್ರಾಮಸ್ಥರು ಮುಂದಾಗಬೇಕೆಂದು ಸಲಹೆ ನೀಡಿದರು.
ಮದ್ದೂರು ತಾಲೂಕಿನವರಾದ ಕೆ.ಎಂ.ಉದಯ್, ದಿನೇಶ್ ಗೂಳಿಗೌಡ ಹಾಗೂ ಮಧು ಜಿ.ಮಾದೇಗೌಡ ಮೂವರು ಶಾಸಕರಾಗಿ ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದ್ದು, ಮೂವರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಗ್ರಾಮದ ಬಸವೇಶ್ವರಸ್ವಾಮಿ ದೇಗುಲದ ನಿರ್ಮಾಣಕ್ಕೆ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಸುನೀತಾ ರಾಮಸ್ವಾಮಿ ಹಾಗೂ ಮಕ್ಕಳ ತಜ್ಞರಾದ ಡಾ. ಶೀತಲ್, ಸೋಮಶೇಖರ್ ಅವರು ಹೆಚ್ಚಿನ ನೆರವು ನೀಡಿದ್ದಾರೆ ಎಂದರು.
ಶಾಸಕರಾದ ಕೆ ಎಂ ಉದಯ್, ಮಧು ಜಿ.ಮಾದೇಗೌಡ, ಕಾರ್ಯಪಾಲಕ ನಿವೃತ್ತ ಇಂಜಿನಿಯರ್ ಸುನೀತಾ ರಾಮಸ್ವಾಮಿ, ಡಾ. ಶೀತಲ್, ಡಾ.ಸೋಮಶೇಖರ್, ಗ್ರಾಮದ ಮುಖಂಡರಾದ ಮಾರಸಿಂಗನಹಳ್ಳಿ ರಾಮಚಂದ್ರು, ಅನಿಲ್‌ಕುಮಾರ್, ಗೂಳಿಗೌಡ, ರಮೇಶ್, ಉಮೇಶ್, ರವಿ, ಮನುಕುಮಾರ್, ಸಂತೋಷ್ ಕುಮಾರ್, ಗೂಳೇಶ್, ನಂಜೇಶ್, ರಮೇಶ್, ಪುಟ್ಟ, ಉಮೇಶ್, ನಾಗರಾಜು, ರಾಚಾ ಇತರರು ಇದ್ದರು.