ಜಿಲ್ಲೆ

ವೈಜ್ಞಾನಿಕ ರೀತಿಯಲ್ಲಿ ತಜ್ಞರಿಂದ ತಪಾಸಣೆ ಮಾಡಿಸಿ: ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಸೂಚನೆ

ಮೈಸೂರು: ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಕೆಸರೆ ನೀರು ಸಂಸ್ಕರಣಾ ಘಟಕ ಹಾಗೂ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಸರೆ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ನೀರು ಸಂಸ್ಕರಣಾ ಘಟಕದಲ್ಲಿ ಅಳವಡಿಸಿಕೊಂಡಿರುವ ವಿಧಾನ ಹಾಗೂ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಇಲ್ಲಿರುವ ಪ್ರದೇಶದಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸಿ ಹೂವಿನ ಹಾಗೂ ಉತ್ತಮ ಗಿಡಗಳನ್ನು ಹಾಕಿ ನಿರ್ವಹಣೆ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿ ಹಳ್ಳಿಗಳ ಕಡೆ ಸ್ವಚ್ಛತೆ ಆದ್ಯತೆ ನೀಡಬೇಕು. ಈ ಬಗ್ಗೆ ಜನರಲ್ಲಿಯೂ ಜಾಗೃತಿ ಮೂಡಿಸಬೇಕು. ಒಣಕಸ ಹಾಗೂ ಹಸಿ ಕಸದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅದರಂತೆ ಸ್ವಚ್ಛತೆಗೆ ಸಾರ್ವಜನಿಕರಿಂದಲೂ ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿದರು.

ನಂತರ ಉಪಲೋಕಾಯುಕ್ತರು, ಕೆಸರೆ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮದ ಜನರು ಮನವಿಯ ಮೇರೆಗೆ ವೈಜ್ಞಾನಿಕ ರೀತಿಯಲ್ಲಿ ತಜ್ಞರಿಂದ ತಪಾಸಣೆ ಮಾಡಿಸಿ, 5 ಕಿ.ಮೀ. ಒಳಗೆ ಯಾವುದಾದರೂ ಮನೆಯಲ್ಲಿನ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದರೆ ಜಿಲ್ಲಾಧಿಕಾರಿ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಘನ ತ್ಯಾಜ್ಯ ನಿರ್ವಹಣಾ ಘಟಕದಿಂದ 500 ಮೀಟರ್ ಒಳಗೆ ನಿವೇಶನಗಳು ಇದ್ದರೆ ರದ್ದು ಪಡಿಸುವ ಕೆಲಸ ಮಾಡಲಾಗುವುದು. ಇದರಿಂದ ಮಕ್ಕಳಿಗೆ ಹಾಗೂ ಜನರಿಗೆ ವಾಸನೆಯಿಂದ ಆರೋಗ್ಯದಲ್ಲಿ ಸಮಸ್ಯೆ ಆಗುವ ಬಗ್ಗೆ ಪರಿಶೀಲನೆ ಮಾಡಬೇಕು. ಜತೆಗೆ, ಮುನ್ನೆಚ್ಚರಿಕೆ ಕ್ರಮವಾಗಿ ಜನರಿಗೆ ಘಟಕದಿಂದ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಆಸಿಫ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.