ಬಾಗಲಕೋಟೆ: ಕೃಷಿಯ ಜೊತೆ ಹೈನುಗಾರಿಕೆ ಪೂರಕ ಉದ್ಯೋಗವಾಗಿದ್ದು, ವೈಜ್ಞಾನಿಕ ರೀತಿಯಲ್ಲಿ ಪಶುಪಾಲನೆ ಕೈಗೊಳ್ಳುವಂತೆ ಅವಳಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಂಗಣ್ಣ ಹಂಡಿ ಹೇಳಿದರು.
ಬಾದಾಮಿ ತಾಲೂಕಿನ ಗುಡ್ಡದ ಮಲ್ಲಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಶೇಖರಣಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನೂತನವಾಗಿ ಸ್ಥಾಪನೆಯಾದ ಹಾಲು ಉತ್ಪಾದಕರ ಸಂಘದಿಂದ ಗ್ರಾಮದ ಜನರಿಗೆ ಹೈನುಗಾರಿಕೆ ಉದ್ಯೋಗ ಮಾಡಲು ಅನುಕೂಲವಾಗಿದ್ದು, ಒಕ್ಕೂಟದ ಸೌಲಭ್ಯ ಮತ್ತು ಸರ್ಕಾರದ ೫ ರೂ.ಗಳ ಪ್ರೋತ್ಸಾಹಧನ ಕುರಿತು ತಿಳಿಸಿದರು.
ಒಕ್ಕೂಟದ ನಿರ್ದೇಶಕ ಐ.ಎಸ್.ಕರಿಗೌಡರ ಮಾತನಾಡಿ, ಹೈನುಗಾರಿಕೆ ಉದ್ಯೋಗ ರೈತರಿಗೆ ವರದಾನವಾಗಿದ್ದು, ಕೃಷಿ ಜೊತೆಗೆ ರಾಸುಗಳ ಪಾಲನೆ ಪೋಷಣೆ ಉಪಯುಕ್ತವಾಗಿದೆ. ರೈತರು ಒಳ್ಳೆ ಒಳ್ಳೆ ಹಸು ಮತ್ತು ಎಮ್ಮೆಗಳನ್ನು ಸಾಕಿ ಹೆಚ್ಚು ಹಾಲು ಉತ್ಪದನೆ ಮಾಡಿ ಡೈರಿಗೆ ಹಾಲು ಹಾಕಿ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಮಹಿಳೆಯರಿಗೆ ಸ್ವಾವಲಂಬನೆ ಜೀವನ ನಡೆಸಲು ಹೈನುಗಾರಿಕೆ ಉಪಯುಕ್ತವಾಗಿದೆ ಎಂದರು.
ಸಂಘದ ಅಧ್ಯಕ್ಷ ಬಸವರಾಜ ಡೊಳ್ಳಿನ, ಉಪ ವ್ಯವಸ್ಥಾಪಕ ಡಾ.ಬಿ.ಕೆ.ಮಠ, ಸಹಾಯಕ ವ್ಯವಸ್ಥಾಪಕ ಆರ.ಎನ.ಪವಾರ, ವಿಸ್ತರಣಾಧಿಕಾರಿ ವಿ.ಆರ.ನೆಟಕಟ್ಟಿ, ಕಾರ್ಯಕಾರಿ ಮಂಡಳಿಯ ಸದಸ್ಯ ಸುರೇಶ ಕೋಲಾರ ಸೇರಿದಂತೆ ಇತರರು ಇದ್ದರು.