ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನದ ಕಡೆಗೆ ಒಂದೆರಡು ಹೆಜ್ಜೆ ಉಪನ್ಯಾಸ ಕಾರ್ಯಕ್ರಮವನ್ನು ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಉದ್ಘಾಟಿಸಿದರು. ಡಾ.ರವೀಂದ್ರನಾಥ, ಶ್ರೀಕಾಂತ ಬಡದಾಳೆ, ವಿವೇಕಾನಂದ ಹೊದಲೂರೆ, ಭೀಮಾಶಂಕರ ಬಿರಾದಾರ, ಡಾ,ಮಲ್ಲಿಕಾರ್ಜುನ ಲಕಶೆಟ್ಟಿ, ಡಾ.ರುದ್ರಮಣಿ ಮಠಪತಿ ಇದ್ದರು. 
ಜಿಲ್ಲೆ

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ

ಬಸವಕಲ್ಯಾಣ: ಜಗತ್ತಿನ ಪ್ರತಿ ಸಂಗತಿಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಕಾಣಬೇಕು. ವಿಜ್ಞಾನದ ಸೈದ್ಧಾಂತಿಕ ಜ್ಞಾನದ ಜತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಹೊಸ ತಿಳುವಳಿಕೆ ಪಡೆಯಬೇಕು ಎಂದು ತಹಸೀಲ್ದಾರ್ ಡಾ. ದತ್ತಾತ್ರೇಯ ಗಾದಾ ಹೇಳಿದರು.

ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನದ ಕಡೆಗೆ ಒಂದೆರಡು ಹೆಜ್ಜೆ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೋಕದ ಎಲ್ಲ ಸಂಗತಿಗಳನ್ನು ಕುರಿತು ತಾರ್ಕಿಕವಾಗಿ, ವೈಚಾರಿಕವಾಗಿ ಪರಿಶೀಲಿಸುವ ಗುಣ ವಿಜ್ಞಾನಕ್ಕಿದೆ. ವೈಜ್ಞಾನಿಕ ವಲಯದಲ್ಲಿ ಯಾವುದೂ ಪ್ರಶ್ನಾತೀತವಲ್ಲ. ಎಲ್ಲವೂ ಪ್ರಶ್ನಾರ್ಹವೇ ಆಗಿದೆ ಎಂದರು.

ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರವೀಂದ್ರನಾಥ ನಾರಾಯಣಪುರ ಮಾತನಾಡಿ, ಸಾರ್ವತ್ರಿಕ ಸತ್ಯವನ್ನು ಪ್ರತಿಪಾದಿಸುವ ಗುಣ ವಿಜ್ಞಾನಕ್ಕಿದೆ. ವಿಜ್ಞಾನವೇ ಈ ಕಾಲದ ನಿಜವಾದ ಜೀವನ ಧರ್ಮವಾಗಿದೆ. ಕೃಷಿ, ಹೈನುಗಾರಿಕೆ, ಅಣು, ಕಣ , ಬಾಹ್ಯಕಾಶ, ತಂತ್ರಜ್ಞಾನ, ಆರೋಗ್ಯ ಸೇರಿ ಹಲವು ರೀತಿಯ ವೈಜ್ಞಾನಿಕ ಶೋಧನೆಗಳು ನಿರಂತರ ನಡೆದಿವೆ. ಮೂಲ ವಿಜ್ಞಾನದ ಬೆಳವಣಿಗೆಗಾಗಿಯೇ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸ್ಥಾಪನೆಯಾಗಿದೆ ಎಂದರು.

ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕಶೆಟ್ಟಿ ಮಾತನಾಡಿ, ನಮ್ಮ ಹಲವಾರು ಪ್ರಶ್ನೆಗಳಿಗೆ ಮತ್ತು ಸವಾಲುಗಳಿಗೆ ವೈಜ್ಞಾನಿಕ ಸಂಶೋಧನೆಗಳಲ್ಲಿ ಉತ್ತರಗಳಿವೆ. ಸಿ.ವಿ.ರಾಮನ್ ಅವರಿಗೆ ನೋಬಲ್ ಪಾರಿತೋಷಕ ಸಂದ ನೆನಪು ರಾಷ್ಟ್ರೀಯ ವಿಜ್ಞಾನದ ದಿನವಾಗಿ ಆಚರಿಸಲಾಗುತ್ತದೆ. ವೈಜ್ಞಾನಿಕ ಅರಿವು ಎಲ್ಲರಿಗೂ ಅತ್ಯಗತ್ಯ ಎಂದರು.

ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವದಿಂದ ಬದುಕು ಕಟ್ಟಿಕೊಳ್ಳಬೇಕು. ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳ ಕೊಡುಗೆ ಅಪಾರ. ಎಲ್ಲರಲ್ಲೂ ವೈಜ್ಞಾನಿಕ ಮನೋಧರ್ಮ ಇರುವುದು ಅಗತ್ಯ ಎಂದರು.

ಬಿಡಿಪಿಸಿ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ಪ್ರಾಚಾರ್ಯ ಡಾ.ರುದ್ರಮಣಿ ಮಠಪತಿ, ಅಶೋಕ ರೆಡ್ಡಿ, ವಿವೇಕಾನಂದ ಶಿಂಧೆ, ಗಂಗಾಧರ ಸಾಲಿಮಠ, ಸಚಿನ್ ಬಿಡವೆ, ನೀಲಮ್ಮ ಮೇತ್ರೆ, ನಾಗವೇಣಿ ಬಿರಾದಾರ, ಸಂಗೀತಾ ಮಹಾಗಾವೆ, ಜಗದೇವಿ ಜಾವಳಗೆ, ಕೃಷ್ಣ ಸದಲಾಪುರ ಇತರರಿದ್ದರು. ಡಾ.ಶಾಂತಲಾ ಖಂಡಾಳೆ ಸ್ವಾಗತಿಸಿದರು. ಡಾ. ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು. ಪವನ ಪಾಟೀಲ ವಂದಿಸಿದರು.