ತೀರ್ಥಹಳ್ಳಿ: ಬದುಕಿನಲ್ಲಿ ಕಂದಾಚಾರ, ಮೌಢ್ಯ, ಅನಗತ್ಯ ಶಾಸ್ತ್ರ ಮತ್ತು ಸಂಪ್ರದಾಯಗಳನ್ನು ಹೊರತುಪಡಿಸಿ ಸುಖ, ಸಂತೋಷದಿಂದ ಅನ್ಯೋನ್ಯವಾಗಿ ಬದುಕಲು ಏನು ಬೇಕು, ಯಾವ ನಿಲುವುಗಳನ್ನು ಹೊಂದಬೇಕು ಎಂಬುದಕ್ಕೆ ಮಹತ್ವಾಕಾಂಕ್ಷೆಯ ಚಿಂತನೆಯನ್ನು ಕುವೆಂಪು ಅವರು ರೂಪಿಸಿದ್ದಾರೆ ಎಂದು ಪ್ರೊ. ಮೇಟಿ ಮಲ್ಲಿಕಾರ್ಜುನ ಅವರು ಹೇಳಿದರು.
ಕುಪ್ಪಳಿಯ ಹೇಮಾಂಗಣದಲ್ಲಿ ಫೋಟೋ ಜರ್ನಲಿಸ್ಟ್ ಅರುಣ್ ನವುಲೆ-ವಿನಿಮೋಳ್ ಅವರ ಮಂತ್ರ ಮಾಂಗಲ್ಯ ವಿವಾಹ ನೆರವೇರಿಸಿ, ಅಂಬೇಡ್ಕರ್ ಮತ್ತು ಕುವೆಂಪು 20ನೇ ಶತಮಾನದಲ್ಲಿ ಇಡೀ ಬದುಕಿನ ದೃಷ್ಟಿಕೋನವನ್ನು ಬದಲಾಯಿಸಿದ ಮಹಾನ್ ಚಿಂತಕರು ಎಂದು ಬಣ್ಣಿಸಿದರು.
ಕಾನೂನಾತ್ಮಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ನೈತಿಕವಾಗಿ ಬದುಕಲು ಏನು ಬೇಕು? ಅದಕ್ಕೆ ಯಾವ ದಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು? ಯಾವ ತರಹದ ಅರಿವು ಹೊಂದಬೇಕು? ಎಂಬುದರ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಹನೀಯರು ಕೊಟ್ಟಿದ್ದಾರೆ. ಇವರು ಹಾಕಿಕೊಟ್ಟ ದಾರಿಯಲ್ಲಿ ನಡೆದಾಗ ಬದುಕು ಎಷ್ಟು ವೈಚಾರಿಕವಾಗಿ ಇರುತ್ತದೆ ಎಂಬುದಕ್ಕೆ ಮಂತ್ರ ಮಾಂಗಲ್ಯ ಸಾಕ್ಷಿ ಎಂದರು.
ಹೆಣ್ಣು ಮತ್ತು ಗಂಡು ತಾವು ಯಾಕೆ ಮದುವೆ ಆಗುತ್ತಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕು. ಎರಡು ಮನಸ್ಸುಗಳ ಮಿಲನ. ಅದು ಬೇರ್ಪಡಿಸಲಾಗದ ಹಾಲು-ಸಕ್ಕರೆಯಂತೆ ಇರಬೇಕು. ವೈಚಾರಿಕ ದೃಷ್ಟಿಕೋನದಿಂದ ಪರಸ್ಪರ ಒಡಂಬಡಿಕೆಯಿಂದ ನಡೆಯುವ ಮದುವೆಯಿಂದಾಗಿ ತಮ್ಮ ಮಕ್ಕಳು ಕೂಡ ಈ ಮಾದರಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವಂತಿರಬೇಕು ಎಂದು ವಿಶ್ಲೇಷಿಸಿದರು.
ಮಂಜುನಾಥ್, ತುಳಸಿ, ಮಂಜುಳಾ, ಹರೀಶ್, ಪತ್ರಕರ್ತ ಎನ್.ರವಿಕುಮಾರ್ ಇತರರಿದ್ದರು.