ಜಿಲ್ಲೆ

ವೈಚಾರಿಕ ಜಾತ್ರೆಯ ರಥೋತ್ಸವ ಸಂಪನ್ನ

ಇಟಗಿ: ಸಮೀಪದ ಬೈಲೂರು ಗ್ರಾಮದಲ್ಲಿ ಚನ್ನಬಸವೇಶ್ವರ ರಥೋತ್ಸವವು ಗುರುವಾರ ಸಂಜೆ ಸಕಲ ವೈಭವದೊಂದಿಗೆ ನೆರವೇರಿತು. ಚಿನ್ನಲೇಪಿತ ಚನ್ನಬಸವೇಶ್ವರರ ಮೂರ್ತಿ, ನಂದಿಮೂರ್ತಿ ಹಾಗೂ ವಚನ ಸಂಪುಟ ರಥದಲ್ಲಿಟ್ಟು ಎಳೆಯಲಾಯಿತು. ಸಾವಿರಾರು ಭಕ್ತರು ಹರ ಹರ ಮಹಾದೇವ, ಚನ್ನಬಸವಣ್ಣನವರಿಗೆ ಜಯವಾಗಲಿ ಕೂಗಿ ರಥ ಮುನ್ನಡೆಸಿದರು.

ನಿಡಸೋಸಿ ನಿಜಲಿಂಗೇಶ್ವರ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಬಾಲ್ಕಿ ಗುರುಬಸವ ಪಟ್ಟದ್ದೇವರು, ರಬಕವಿ ಗುರುಸಿದ್ಧೇಶ್ವರ ಸ್ವಾಮೀಜಿ, ಶಾಸಕ ಬಾಬಾಸಾಹೇಬ ಪಾಟೀಲ, ಬಸವ ಕಲ್ಯಾಣದ ಬಸವಲಿಂಗ ದೇವರು, ಲೋಕೇಶ ದೇವರು ಹಾಗೂ ಭಕ್ತರು ಭಾಗವಹಿಸಿದ್ದರು.

ವೈಚಾರಿಕ ಜಾತ್ರೆ: ಬೈಲೂರಿನ ಚನ್ನಬಸವೇಶ್ವರ ಜಾತ್ರೆಯು ಈ ಭಾಗದಲ್ಲಿ ದಶಕಗಳಿಂದ ವೈಚಾರಿಕ ಜಾತ್ರೆ ಎಂದು ಪ್ರಸಿದ್ದಿ ಪಡೆದಿದೆ. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಸೇರಿ ಯಾವುದೇ ತಿನ್ನುವ ಪದಾರ್ಥ ಎಸೆಯದಿರುವುದು ರಥೋತ್ಸ್ಸವದ ವಿಶೇಷತೆಯಾಗಿದ್ದು, ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.