ಜಿಲ್ಲೆ

ವೈಚಾರಕತೆ, ವೈಜ್ಞಾನಿಕತೆಯಿಂದ ಆರೋಗ್ಯಕರ ಸಮಾಜ ನಿರ್ಮಾಣ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಮೈಸೂರು: ವೈಚಾರಿಕತೆ, ವೈಜ್ಞಾನಿಕತೆಯಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಆದರೆ, ಶಿಕ್ಷಣ, ಜ್ಞಾನವಿಲ್ಲದೆ ಸಮಾಜ ಸುಧಾರಣೆಯೂ ಅಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಮುಕ್ತಗಂಗೋತ್ರಿ ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರೊ.ಎನ್.ಲಕ್ಷ್ಮೀ ಅವರಿಗೆ ಅಭಿನಂದನೆ, ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವ ಸಮೂಹವು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ವಿಚಾರದಲ್ಲೂ ಆಳವಾದ ಅಧ್ಯಯನ ಕೈಗೊಳ್ಳಬೇಕು. ಪುಸ್ತಕ ಓದುವುದರಿಂದ ಭೌದ್ಧಿಕವಾಗಿ ಬಲಾಢ್ಯರಾಗಲು ಸಾಧ್ಯ ಎಂದರು.

ಯೂಟ್ಯೂಬ್, ಸಾಮಾಜಿಕ ಜಾಲತಾಣದ ಮೂಲಕ ಪರಿಪೂರ್ಣವಾದ ಸಮಾಜ ನಿರ್ಮಿಸಲು ಸಾಧ್ಯವಾಗಲ್ಲ. ಡಿಜಿಟಲ್ ಮಾಧ್ಯಮದಿಂದ ದೊರೆಯುವ ಮಾಹಿತಿಯಿಂದ ವಿಷಯದ ಗ್ರಹಿಕೆ, ಅಧ್ಯಯನ, ವಿಶ್ಲೇಷಣೆ, ಜಾಗೃತಿ ಮೂಡಲ್ಲ. ಆಳವಾದ ಅಧ್ಯಯನದಿಂದ ಮಾತ್ರ ಇದು ಸಾಧ್ಯ. ಪ್ರತಿಯೊಬ್ಬರೂ ಓದುವ ಅಭ್ಯಾಸ ಮೈಗೂಡಿಸಿಕೊಳ್ಳಬೇಕು ಎಂದರು.

ಮೂಢನಂಬಿಕೆ, ಮೌಢ್ಯ, ಕಂದಾಚಾರ, ಅವೈಜ್ಞಾನಿಕತೆಯನ್ನು ತೊಲಗಿಸಲು ಶಿಕ್ಷಣ ಮುಖ್ಯವಾಗಿದೆ. ಶಿಕ್ಷಣವು ವೈಜ್ಞಾನಿಕತೆ ಹಾಗೂ ವೈಚಾರಿಕತೆಯಿಂದ ಕೂಡಿರಬೇಕು. ಅನಾಗರಿಕತೆ ಹಾಗೂ ಶೋಷಣೆಯನ್ನು ತೊಡೆದು ಹಾಕಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಮಹಿಳೆಯರ ಸಮಾನತೆಗಾಗಿ ಬಾಬಾ ಸಾಹೇಬರು ಜಾರಿಗೆ ತಂದ ಹಿಂದು ಕೋಡ್ ಬಿಲ್ ಕುರಿತು ಈಗಿನ ಕಾಲಘಟ್ಟದಲ್ಲಿ ಯಾವುದೇ ಕಾರ್ಯಾಗಾರದಲ್ಲಿ ಚರ್ಚೆಗಳು ನಡೆಯುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕಾದ ಮಹಿಳೆಯರು ಮೌಢ್ಯ, ಕಂದಾಚಾರಕ್ಕೆ ಸಿಲುಕಿದ್ದಾರೆ. ಹೆಣ್ಣುಮಕ್ಕಳು ವಿದ್ಯಾವಂತರಾಗಿದ್ದರೂ ಮೌಢ್ಯದ ಕಡೆಗೆ ವಾಲುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂವಿಧಾನದತ್ತ ಹಕ್ಕುಗಳನ್ನೂ ಮಹಿಳೆಯರು ಕೇಳುತ್ತಿಲ್ಲ. ಸ್ವಾವಲಂಬನೆ, ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯ ಅಧಿಕಾರದ ಕುರಿತು ಪ್ರತಿಪಾದನೆಯನ್ನೇ ಮಾಡುತ್ತಿಲ್ಲ. ಹೀಗಾಗಿಯೇ ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರು ಪ್ರಗತಿಯಾಗಲು ಸಾಧ್ಯವಾಗಿಲ್ಲ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದರು.

ಶಿಕ್ಷಣವು ಹುಲಿಯ ಹಾಲಿನಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತಿನಂತೆ ಬಡತನದ ಹಿನ್ನೆಲೆಯಲ್ಲಿ ಬೆಳೆದು ಬಂದ ಪ್ರೊ.ಎನ್.ಲಕ್ಷ್ಮೀ ಅವರು ವಿದ್ಯಾವಂತರಾಗಿ ಪ್ರಾಧ್ಯಾಪಕರ ಹುದ್ದೆಯಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿ, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶ್ಲಾಘನೆ ಮಾಡಿದರು.

ಕರಾಮುವಿ ಡೀನ್(ಶೈಕ್ಷಣಿಕ) ಪ್ರೊ.ಎನ್.ಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ‘ಅರಿವಿನ ಸಿರಿ’ ಅಭಿನಂದನಾ ಗ್ರಂಥ, ಪ್ರೊ.ಎನ್.ಲಕ್ಷ್ಮೀ ಅವರ ನಾಲ್ಕು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಉರಿಲಿಂಗಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಡಾ.ಆರ್.ಕಾವಾಲಮ್ಮ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್, ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ರಾಮೇಗೌಡ, ನಿವೃತ್ತ ಪ್ರಾಧ್ಯಾಪಕ ಪ್ರೊ.ನಾಗಣ್ಣ, ಸಾಹಿತಿ, ಚಿಂತಕ ಬಂಜಗೆರೆ ಜಯಪ್ರಕಾಶ್, ಚಿಂತಕ ಪ್ರೊ.ಕೆ.ಎಸ್.ಭಗವಾನ್, ಅಚಲ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ.ಚಂದ್ರಶೇಖರ್ ಇದ್ದರು