ಚಿತ್ರದುರ್ಗ: ಮಹಾವಿಷ್ಣುವಿನ ವಿವಿಧ ಅವತಾರಗಳ ಮಾದರಿಯ ಅಲಂಕಾರ ಸೇವೆ, ವಿಶೇಷ ಪೂಜೆಯೊಂದಿಗೆ ವೈಕುಂಠ ಏಕಾದಶಿಯನ್ನು ಜಿಲ್ಲೆಯ ಹಲವು ದೇಗುಲಗಳಲ್ಲಿ ಜ. 10ರಂದು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ.
ವಾಸವಿ ಮಹಲ್‌ನ ಕನ್ಯಕಾಪರಮೇಶ್ವರಿ ದೇವಿಯ ದೇಗುಲದಲ್ಲಿ ಆರ್ಯವೈಶ್ಯ ಸಂಘದಿಂದ ಏಕಾದಶಿ ಅಂಗವಾಗಿ ಈ ಬಾರಿ ವಾಮನ ಅವತಾರ ಮಾದರಿಯ ದರ್ಶನಕ್ಕೆ ರಾತ್ರಿ 9.30ರ ವರೆಗೂ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ದೇಗುಲ ಆವರಣದಲ್ಲಿ ಗುರುವಾರ ಭರದ ಸಿದ್ಧತೆ ಜರುಗಿದವು.
ಉತ್ತರ ದಿಕ್ಕಿನ ಬಾಗಿಲು ಮಹಾದ್ವಾರದ ಮೂಲಕ ದೇಗುಲ ಪ್ರವೇಶಿಸಿ ಶ್ರೀಲಕ್ಷ್ಮೀ, ಪದ್ಮಾವತಿ ಸಮೇತ ಶ್ರೀನಿವಾಸ ಸ್ವಾಮಿಯ ಪರಿವಾರ ಕುಳ್ಳಿರಿಸಿರುವ ತೊಟ್ಟಿಲ ಕೆಳಗಿನಿಂದ ಸಾಗಲು ಭಕ್ತರಿಗೆ ಅನುವು ಮಾಡಿಕೊಡಲಾಗುತ್ತಿದೆ. ಸುವರ್ಣ ಹಾಗೂ ವಜ್ರಾಂಗಿ ಆಭರಣಗಳಿಂದ ಕನ್ಯಕಾಪರಮೇಶ್ವರಿ ದೇವಿಗೆ, ನಗರೇಶ್ವರ ಸ್ವಾಮಿ, ಜನಾರ್ಧನಸ್ವಾಮಿಯ ಮೂರ್ತಿಗೂ ವಿಶೇಷ ಅಲಂಕಾರ ನಡೆಯಲಿದೆ.
ವೈಕುಂಠ ದ್ವಾರವನ್ನು ಬೆಳಗ್ಗೆ 7.30ಕ್ಕೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಎಲ್.ಇ.ಶ್ರೀನಿವಾಸ್ ಬಾಬು ಅಧ್ಯಕ್ಷತೆ ವಹಿಸುವರು. ಉದ್ಯಮಿ ಮೊಹಮ್ಮದ್ ಅಜ್ಮಲ್ ಪಾಲ್ಗೊಳ್ಳುವರು. ಸಂಜೆ 5ಕ್ಕೆ ಸಾರ್ವಜನಿಕ ದರ್ಶನ ದ್ವಾರವನ್ನು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಉದ್ಘಾಟಿಸುವರು.
ಅಯ್ಯಪ್ಪಸ್ವಾಮಿ: ಪ್ರಥಮ ಬಾರಿ ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಗುಲದ ಪ್ರಧಾನ ಅರ್ಚಕ ಸತೀಶ್ ಸ್ವಾಮಿ, ಆನಂದಸ್ವಾಮಿ ನೇತೃತ್ವದಲ್ಲಿ ಬೆಳಗ್ಗೆ 6ರಿಂದ ಪ್ರಕಾರೋತ್ಸವ, ಉತ್ತರ ದಿಕ್ಕಿನ ಬಾಗಿಲು ಪೂಜೆ, ಸತ್ಯನಾರಾಯಣ ಸ್ವಾಮಿಗೆ ಅಲಂಕಾರ, ಅಭಿಷೇಕ ಸೇವೆ ನೆರವೇರಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಾದ್ವಾರದ ಮೂಲಕ ಸ್ವಾಮಿಯ ದರ್ಶನ ಪಡೆದು, ಪೂಜಾ ಕಾರ್ಯಕ್ರಮ ಸಂಪನ್ನಗೊಳಿಸಬೇಕು ಎಂದು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ನ ಅಧ್ಯಕ್ಷ ಶರಣ್‌ಕುಮಾರ್, ಉಪಾಧ್ಯಕ್ಷ ಮಲ್ಲಿಕಾರ್ಜುನ, ಕಾರ್ಯದರ್ಶಿ ಎಂ.ಪಿ.ವೆಂಕಟೇಶ್ ಕೋರಿದ್ದಾರೆ.
ಆನೆಬಾಗಿಲು: ವೈಕುಂಠ ಏಕಾದಶಿ ಅಂಗವಾಗಿ ನಗರದ ಆನೆಬಾಗಿಲು ಸಮೀಪದ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ ಸನ್ನಿಧಿಯಲ್ಲಿ 10ರಂದು ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂಜಾನೆ 4ಕ್ಕೆ ಸುಪ್ರಭಾತ ಸೇವೆ, 4.30ಕ್ಕೆ ಉತ್ತರ ದಿಕ್ಕಿನ ಬಾಗಿಲ ಪೂಜಾ ಅಲಂಕಾರ ಸೇವೆ, 5ಕ್ಕೆ ಮಹಾಮಂಗಳಾರತಿ ನೆರವೇರಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.