ಮದ್ದೂರು: ಐದು ತಿಂಗಳ ವೇತನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕಾವೇರಿ ನೀರಾವರಿ ನಿಗಮ (ನಂ.3 ವಿ.ಸಿ ನಾಲಾ ಉಪವಿಭಾಗ)ದ ನೀರುಗಂಟಿಗಳು ಗುರುವಾರ ಪಟ್ಟಣದ ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನೀರುಗಂಟಿಗಳ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿ, ಗುತ್ತಿಗೆ ಪಡೆದಿರುವ ಸಂಸ್ಥೆ ಕಳೆದ 5 ತಿಂಗಳಿಂದ ವೇತನ ನೀಡಿಲ್ಲ. ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ದಿನಗೂಲಿ ನೌಕರರಾದ ನಮಗೆ ಸರ್ಕಾರದಿಂದ ಪ್ರತಿ ಮಾಹೆ 17,500 ರೂ. ವೇತನ ಬಿಡುಗಡೆಯಾಗುತ್ತಿದೆ. ಆದರೆ, ಕಚೇರಿಯಿಂದ 12 ಸಾವಿರ ರೂ. ಮಾತ್ರ ವೇತನ ನೀಡುತ್ತಿದ್ದಾರೆ ಎಂದು ದೂರಿದರು.
ಒಂದೂವರೆ ವರ್ಷದಿಂದ ಇಎಸ್‌ಐ ಕಾರ್ಡ್ ನೀಡದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಪಿಎಫ್ ಹಣವನ್ನು ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ಜಮೆ ಮಾಡಲಾಗುತ್ತಿದೆ. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕೆಲಸ ಮಾಡುವ ನೌಕರರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ ಮಾತನಾಡಿ, ಕಳೆದ ಮಾರ್ಚ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂರ್ನಾಲ್ಕು ತಿಂಗಳಿಂದ ವೇತನ ಬಿಡುಗಡೆಗೆ ತೊಂದರೆಯಾಗಿದೆ. ಮೂರ್ನಾಲ್ಕು ದಿನಗಳ ಒಳಗೆ ವೇತನ ಪಾವತಿಗೆ ಕ್ರಮ ವಹಿಸಲಾಗುವುದು ಇಎಸ್‌ಐ ಮತ್ತು ಪಿಎಫ್ ಸಮಸ್ಯೆಗಳ ಬಗ್ಗೆ ಆ.28 ರಂದು ಗುತ್ತಿಗೆದಾರರ ಜತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಅಂತ್ಯಗೊಂಡಿತು.ಸಂಘದ ಗೌರವಾಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಎನ್.ಎಸ್.ಶ್ರೀಧರ ಹಾಗೂ ಪುಟ್ಟಸ್ವಾಮಿ, ಬಸವರಾಜು ಮತ್ತಿತರರು ಇದ್ದರು.