ಚಿತ್ರದುರ್ಗ: ಐತಿಹಾಸಿಕ ಕೋಟೆಯೊಳಗಿನ ಮೇಲುದುರ್ಗದ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಭಾನುವಾರ ರುಕ್ಮಿಣಿ, ಸತ್ಯಭಾಮರ ಸಮೇತ ಸ್ವಾಮಿಯ ಬ್ರಹ್ಮ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಶುದ್ಧ ಪೂರ್ಣಿಮೆ ಅಂಗವಾಗಿ ಮಧ್ಯಾಹ್ನ 12ರಿಂದ 3.30ರ ಶುಭ ಮುಹೂರ್ತದಲ್ಲಿ ವೇದ, ಮಂತ್ರ ಘೋಷಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ಬ್ರಹ್ಮ ರಥೋತ್ಸವ ಸಂಪನ್ನಗೊಂಡಿತು.
ವಿವಿಧ ಬಗೆಯ ಪುಷ್ಪಗಳಿಂದ ಆಕರ್ಷಕವಾಗಿ ಅಲಂಕರಿಸಿದ ನಂತರ ಸ್ವಾಮಿಯನ್ನು ರಥದಲ್ಲಿ ಕೂರಿಸಿ, ಮಹಾಮಂಗಳಾರತಿ ಬಳಿಕ ರಥೋತ್ಸವಕ್ಕೆ ಚಾಲನೆ ದೊರೆಯಿತು. ಭಕ್ತರು ಶ್ರದ್ಧಾ-ಭಕ್ತಿ, ಜಯಘೋಷದೊಂದಿಗೆ ತೇರು ಎಳೆದು ಪುನೀತರಾದರು. ನೆರೆದಿದ್ದವರಿಗೆ ಪ್ರಸಾದ ವಿತರಿಸಲಾಯಿತು.
ಬ್ರಹ್ಮರಥೋತ್ಸವ ನಿಮಿತ್ತ ದೇಗುಲ ಹಾಗೂ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶನಿವಾರ ಕ್ರೋನಾಮ ಸಂವತ್ಸರದ ಮಾರ್ಗಶಿರ ಶುದ್ಧ ಚತುರ್ದಶಿಯಂದು ಅಭಿಜಿನ್ ಮುಹೂರ್ತದಲ್ಲಿ ಪಂಚಾಮೃತ ಅಭಿಷೇಕ ನೆರವೇರಿಸಿದ ಬಳಿಕ ಮಧ್ಯಾಹ್ನ ಕಳಶಾರಾಧನೆ, ಹೋಮ ನಂತರ ವಿಜೃಂಭಣೆಯಿಂದ ಗರುಡೋತ್ಸವ ಮತ್ತು ರುಕ್ಮಿಣಿ ಸತ್ಯಭಾಮ ಸಮೇತ ಕಲ್ಯಾಣೋತ್ಸವ ನೆರವೇರಿತು. ಅರ್ಚಕ ಅನಿರುದ್ಧ ಶ್ರೀನಾಥ ಭಟ್ಟರು ಮತ್ತು ಸಹೋದರರು ಪೂಜಾ ಕೈಂಕರ್ಯ ನಡೆಸಿಕೊಟ್ಟರು.
ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಅರ್ಚಕ ಸಿ.ಆರ್.ಕಿರಣ್ ನೇತೃತ್ವದಲ್ಲಿ ಹನುಮದ್ವ್ರತದ ಅಂಗವಾಗಿ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವ ನೆರವೇರಿತು.