ಜಿಲ್ಲೆ

ವೆಂಕಟೇಶ್ ನಿಧನಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ

Hassan - Ramesh H R

ಹಾಸನ: ನಾಡಿಗೆ ನುಗ್ಗಿದ ಆನೆ ಸೇರಿದಂತೆ ಹಲವಾರು ವನ್ಯಜೀವಿಗಳ ಸೆರೆಗೆ ಅರಿವಳಿಕೆ ಚುಚ್ಚುಮದ್ದುಗಳನ್ನು ಶೂಟ್ ಮಾಡಲು ಸಹಕರಿಸಿದ ಅರಣ್ಯ ಇಲಾಖೆಯ ನೌಕರ ವೆಂಕಟೇಶ್ ನಿಧನಕ್ಕೆ ಅರಣ್ಯ, ಜೀವಿಶಾಸ್ತ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾದ ಬಳಿಕವೂ ಆನೆ ಕ್ಷಿಪ್ರ ಕಾರ್ಯಪಡೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಆನೆಗಳಿಗೆ ಅರಿವಳಿಕೆ ನೀಡುವಲ್ಲಿ ಸಿದ್ಧಹಸ್ತರಾಗಿದ್ದ ಶಾರ್ಪ್‌ಶೂಟರ್ ಆನೆ ವೆಂಕಟೇಶ್ ಎಂದೇ ಖ್ಯಾತರಾಗಿದ್ದ ವೆಂಕಟೇಶ್ ಸಾವಿನಿಂದ ದುಃಖಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಗಾಯಗೊಂಡಿದ್ದ ಭೀಮ ಎಂದು ಸ್ಥಳೀಯರು ಕರೆಯುತ್ತಿದ್ದ ಕಾಡಾನೆಗೆ ಚಿಕಿತ್ಸೆ ನೀಡುವ ಸಲುವಾಗಿ ಅರಿವಳಿಕೆ ಚುಚ್ಚುಮದ್ದನ್ನು ಶೂಟ್ ಮಾಡುವ ವೇಳೆ ಕಾಡಾನೆ ದಾಳಿ ನಡೆಸಿದ್ದು, ವೆಂಕಟೇಶ್ ಅವರು ಮೃತಪಟ್ಟಿರುವುದಾಗಿ ತಿಳಿದು ತುಂಬಾ ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ವೆಂಕಟೇಶ್ ಅವರ ಅಕಾಲಿಕ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪಾರ್ಥಿಸುತ್ತೇನೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

15 ಲಕ್ಷ ರೂ. ಪರಿಹಾರ ವಿತರಣೆ

ಮೃತ ಎಚ್.ಎಚ್. ವೆಂಕಟೇಶ್ ಅವರ ಪತ್ನಿ ಜಿ.ಎಸ್. ಮಂಜುಳಾ ಮತ್ತು ಮಕ್ಕಳಾದ ಮನ್ವಿತ್ ಮತ್ತು ಮೋಹಿತ್ ಅವರಿಗೆ ಹಿರಿಯ ಅರಣ್ಯಾಧಿಕಾರಿಗಳು ಸಂತಾಪ ಹೇಳಿ 15 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದಾರೆ.