ಗದಗ: ಎದೆನೋವು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಶುಕ್ರವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮವೊಂದರ 80 ವರ್ಷದ ವೃದ್ಧೆ ಮಾ.24ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಕರೊನಾ ಸೋಂಕಿನ ಶಂಕೆಯ ಮೇರೆಗೆ ಮಾ.25ರಂದು ವೃದ್ಧೆಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಆದರೆ, ವೃದ್ಧೆಯ ಮಾದರಿಯ ವೈದ್ಯಕೀಯ ವರದಿಯಲ್ಲಿ ಕರೊನಾ ವೈರಸ್ ನೆಗೆಟಿವ್ ಎಂದು ಬಂದಿತ್ತು. ಸಹಜ ಕಾಯಿಲೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಮಾರ್ಚ್ 24 ರಂದು ಮಂಗಳೂರಿನಿಂದ ಬಾಗಲಕೋಟೆಗೆ ವೃದ್ಧೆ ಲಾರಿಯಲ್ಲಿ ತೆರಳುತ್ತಿದ್ದರು. ಜಿಲ್ಲೆಯ ರೋಣ ಪಟ್ಟಣದಲ್ಲಿ ತಪಾಸಣೆ ವೇಳೆ ಅನಾರೋಗ್ಯ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹೈ ಅಲರ್ಟ್ ಘೊಷಣೆ
ಕಿಲ್ಲರ್ ಕರೊನಾ ವೈರಸ್ ಹರಡದಂತೆ ಗದಗ ಜಿಲ್ಲೆಯಲ್ಲಿ ಹೈ ಅಲರ್ಟ್ ಘೊಷಿಸಲಾಗಿದೆ. ಜಿಲ್ಲೆಯಲ್ಲಿ 2 ಜನ ಹೊಸದಾಗಿ ಸೇರಿದಂತೆ 173 ಜನರ ಮೇಲೆ ನಿಗಾ ಇರಿಸಲಾಗಿದೆ. 11 ಜನರು 28 ದಿನಗಳ ಕಾಲ ಪೂರ್ಣಗೊಳಿಸಿದ್ದಾರೆ. 157 ಜನರು ಮನೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದಾರೆ. 5 ಜನರು ವೈದ್ಯಕೀಯ ಸೌಲಭ್ಯದೊಂದಿಗೆ ಪ್ರತ್ಯೇಕವಾಗಿ ನಿಗಾದಲ್ಲಿ ಇರಿಸಲಾಗಿದೆ.
ಇಲ್ಲಿಯವರೆಗೆ 42 ಜನರ ರಕ್ತದ ಮಾದರಿ ಹಾಗೂ ಗಂಟಲ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿದೆ. 42 ವರದಿಗಳ ಪೈಕಿ 37 ನೆಗೆಟಿವ್, 5 ವರದಿಗಳು ಬರಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಮನೆಯಲ್ಲೇ ಇದ್ದು ಲಾಕ್ಡೌನ್ ಬೆಂಬಲಿಸಿ
ಗಜೇಂದ್ರಗಡ: ತಮ್ಮ ಪ್ರಾಣದ ಹಂಗು ತೊರೆದು ನಮ್ಮೆಲ್ಲರ ಪ್ರಾಣ ರಕ್ಷಣೆಗಾಗಿ ಶ್ರಮಿಸುತ್ತಿರುವ ವೈದ್ಯರು, ನರ್ಸ್ಗಳು, ಪೊಲೀಸರು, ಪೌರಕಾರ್ವಿುಕರು ಹಾಗೂ ಮಾಧ್ಯಮದವರಿಗೆ ಗೌರವ ಸಲ್ಲಿಸಲು ಸಾರ್ವಜನಿಕರು ಏ. 14ರ ವರೆಗಿನ ಲಾಕ್ಡೌನ್ಗೆ ಬೆಂಬಲ ಸೂಚಿಸಿ ಮನೆಯಲ್ಲಿರಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ತಾಲೂಕಾಡಳಿತ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಹಾಗೂ ಪುರಸಭೆ ಆಶ್ರಯದಲ್ಲಿ ಪಟ್ಟಣದ ಪ್ರಮುಖ ರಸ್ತೆ, ವೃತ್ತ ಹಾಗೂ ಬಡಾವಣೆೆಗಳಲ್ಲಿ ಕರೊನಾ ರೋಗ ಹರಡದಂತೆ ಗುರುವಾರ ರೋಗ ನಿರೋಧಕ ಔಷಧ ಸಿಂಪಡಣೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ರ್ಚಚಿಸಿದರು.
ಸಾರ್ವಜನಿಕರ ಆರೋಗ್ಯ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತ ಸೂಚಿಸಿರುವ ಎಲ್ಲ ನಿಯಮಗಳನ್ನು ಸಾರ್ವಜನಿಕರು ಪಾಲಿಸುವ ಮೂಲಕ ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು. ಈ ವೇಳೆ ಅಶೋಕ ವನ್ನಾಲ, ಅಮರೇಶ ಬಳಿಗೇರ, ಮುತ್ತಣ್ಣ ಕಡಗದ, ಭವಾನಿ ಬಾಕಳೆ, ಸುಭಾನಸಾಬ್ ಆರಗಿದ್ದಿ, ನಾಗಣ್ಣ ಲಕ್ಕಲಕಟ್ಟಿ, ಬಾಳು ಗೌಡರ ಸೇರಿ ಇತರ ಅಧಿಕಾರಿಗಳು ಇದ್ದರು.
ಕೇರಳದಿಂದ ಕೂಲಿ ಕಾರ್ವಿುಕರು ವಾಪಸ್
ಶಿರಹಟ್ಟಿ: ತಾಲೂಕಿನ ಜಲ್ಲಿಗೇರಿ ಗ್ರಾಮದಿಂದ ಕೂಲಿ ಕೆಲಸಕ್ಕಾಗಿ ಕೇರಳ ಸೇರಿ ಮತ್ತಿತರೆಡೆ ತೆರಳಿದ್ದರು. ಆದರೆ, ಕರೊನಾ ಭೀತಿ ಆವರಿಸಿದಂತೆ ಗ್ರಾಮದ 8 ಜನರು ತಮ್ಮ ಸುರಕ್ಷತೆ ದೃಷ್ಟಿಯಿಂದ ಗುರುವಾರ ರಾತ್ರಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಅವರ ಕೈಮೇಲಿನ ಛಾಪಾ ನೋಡಿ ಭಯಭೀತರಾದ ಗ್ರಾಮಸ್ಥರು ತಕ್ಷಣ ತಾಲೂಕಾಡಳಿತಕ್ಕೆ ಮಾಹಿತಿ ನೀಡಿ ಬೇರೆ ರಾಜ್ಯಕ್ಕೆ ದುಡಿಯಲು ಹೋದವರು ಮರಳಿ ಆಗಮಿಸಿದ್ದು ಅವರಿಗೆ ಗ್ರಾಮದಲ್ಲಿ ನೆಲೆಸಲು ಅವಕಾಶ ನೀಡಬೇಡಿ ಎಂದು ಮನವರಿಕೆ ಮಾಡಿಕೊಂಡಿದ್ದಾರೆ.
ಗ್ರಾಮಸ್ಥರಿಂದ ಖಚಿತ ಮಾಹಿತಿ ಪಡೆದುಕೊಂಡ ತಾಪಂ ಇಒ ಡಾ. ಎನ್.ಎಚ್. ಓಲೇಕಾರ, ಆರೋಗ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಜಲ್ಲಿಗೇರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಗುರುವಾರ ರಾತ್ರಿ ಕೇರಳದಿಂದ ಆಗಮಿಸಿದ 8 ಜನರ ಕೈಮೇಲೆ ಸೀಲ್ ಹಾಕಲಾಗಿದೆ. ಅವರೆಲ್ಲ ಈಗಾಗಲೇ ಗದಗ ಜಿಮ್್ಸ ಆಸ್ಪತ್ರೆಗೆ ಹೋಗಿ ಪರೀಕ್ಷೆಗೊಳಗಾಗಿದ್ದು, ಅವರಲ್ಲಿ ಕರೊನಾ ವೈರಸ್ ಕಂಡು ಬಂದಿಲ್ಲ. ಅವರನ್ನು 14 ದಿನಗಳ ಕಾಲ ಗೃಹಬಂಧನದಲ್ಲಿ ಇಡಲು ಸೂಚನೆ ನೀಡಲಾಗಿದೆ ಎಂದು ತಾಪಂ ಇಒ ಓಲೇಕಾರ ಹೇಳಿದರು.
ಹೆಚ್ಚಿನ ದರಕ್ಕೆ ಮಾರಿದರೆ ಹುಷಾರ್
ಮುಳಗುಂದ: ಕರೊನಾ ವೈರಸ್ನ ನಿಯಂತ್ರಣಕ್ಕಾಗಿ ಎಲ್ಲೆಡೆ ಕರ್ಫ್ಯೂ ವಿಧಿಸಿದ ಹಿನ್ನೆಲೆಯಲ್ಲಿ ತರಕಾರಿ ಹಾಗೂ ಕಿರಾಣಿ ವ್ಯಾಪಾರಸ್ಥರು ಹೆಚ್ಚಿನ ದರಕ್ಕೆ ದಿನಸಿ ಸಾಮಾನು ಮಾರುತ್ತಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹೇಳಿದರು. ಶುಕ್ರವಾರ ಸಂಜೆ ಪಟ್ಟಣದ ಎಲ್ಲ ತರಕಾರಿ ಮಾರಾಟಗಾರರ ಅಂಗಡಿಗಳಿಗೆ ಭೇಟಿ ನೀಡಿದ ಅವರು, ಪಟ್ಟಣದಲ್ಲಿ ಕೆಲ ಮಾರಾಟಗಾರರು ಹೆಚ್ಚಿನ ದರಕ್ಕೆ ಮಾರುತ್ತಿರುವುದು ಗಮನಕ್ಕೆ ಬಂದಿದ್ದು, ಅಂಥವರ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇವೆ. ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗಾಗಿ ಮಾತ್ರ ಹೊರಗೆ ಬರಬೇಕು. ನಾಲ್ಕಾರು ಜನರ ಗುಂಪುಗಳನ್ನು ಕಟ್ಟಿಕೊಂಡು ಬರುವುದನ್ನು ನಿಷೇಧಿಸಲಾಗಿದೆ. ಅನವಶ್ಯಕವಾಗಿ ತಿರುಗಾಡುವುದು. ಅಲ್ಲಲ್ಲಿ ಕುಳಿತು ಹರಟೆ ಹೊಡೆಯುವುದನ್ನು ಬಿಟ್ಟು ಮನೆಯಲ್ಲಿರಬೇಕು. ಮನೆ ಬಿಟ್ಟು ಹೊರಗೆ ತಿರುಗುವವರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೈಮೀರಿ ಹೋಗುವ ಮುನ್ನ ಎಚ್ಚೆತ್ತುಕೊಳ್ಳಿ
ಹೊಳೆಆಲೂರ: ಮಹಾಮಾರಿ ಕರೊನಾ ಸೋಂಕು ಹರಡುವಿಕೆಯನ್ನು ಪರಿಸ್ಥಿತಿ ಕೈ ಮೀರಿ ಹೋಗುವ ಮುನ್ನವೇ ಸಾರ್ವಜನಿಕರು ಎಚ್ಚೆತ್ತುಕೊಂಡು ಹೊಡೆದೊಡಿಸಲು ಪ್ರತಿಯೊಬ್ಬರೂ ಮನೆಯಲ್ಲಿರುವ ಮೂಲಕ ಸಹಕರಿಸಬೇಕು ಎಂದು ಡಾ. ಪ್ರಕಾಶ ಜಂಬಲದಿನ್ನಿ ಹೇಳಿದರು.
ಹೊಳೆಆಲೂರ ಗಾಪಂ ಸಭಾಭವನದಲ್ಲಿ ವೈದ್ಯರ ಸಂಘ, ಆರೋಗ್ಯ ಇಲಾಖೆ ಹಾಗೂ ಗ್ರಾಪಂ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು. ಕೆಲಸಕ್ಕೆಂದು ಬೇರೆಡೆಗೆ ತೆರಳಿದ್ದವರೆಲ್ಲ ಇದೀಗ ಸ್ವಗ್ರಾಮಕ್ಕೆ ಆಗಮಿಸಿದ್ದು, ಎಲ್ಲ 1800 ಮನೆಗಳಿಗೆ ತೆರಳಿ ಉಚಿತ ಆರೋಗ್ಯ ತಪಾಸಣೆ ನಡೆಸಲು ತೀರ್ವನಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ ಮಾತನಾಡಿ, ಗ್ರಾಮವನ್ನು 8 ವಾರ್ಡ್ಗಳಾಗಿ ವಿಂಗಡಿಸಿ ಪ್ರತಿ ವಾರ್ಡಿಗೆ ಓರ್ವ ವೈದ್ಯ, ಆಯಾ ವಾರ್ಡಿನ ಸದಸ್ಯರು, ಗ್ರಾಪಂ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿ ಸಮಿತಿ ರಚಿಸಲಾಗಿದೆ. ಗ್ರಾಮದ 15 ಸಾವಿರ ಜನರನ್ನು ತಪಾಸಣೆ ನಡೆಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ಶಿವಲೀಲಾ ಸಂಗಳದ, ಡಾ.ಎಸ್. ಪಲ್ಲೇದ, ಡಾ.ಎ.ಎಸ್. ಹಟ್ಟಿ, ಡಾ.ಅನೀಲ ಬೀಮನಗೌಡ್ರ, ಡಾ.ಎಸ್.ವೈ. ಬೇಲಿ, ಡಾ.ಕೆ.ಎ. ಸಂತೋಜಿ, ಗ್ರಾಪಂ ಸದಸ್ಯ ಸುರೇಶ ಗಾಣಿಗೇರ, ಸಂತೋಷ ದೊಡ್ಡಮನಿ, ಬಸವರಾಜ ಕಾತರಕಿ, ಮಲ್ಲಮ್ಮ ಜಿಗಳೂರ, ಪ್ರೇಮಾ ಭಜಂತ್ರಿ ಇತರರಿದ್ದರು.