ಜಿಲ್ಲೆ

ವೃದ್ಧಾಶ್ರಮದಲ್ಲಿ ಶ್ರಮದಾನ

ನಾಪೋಕ್ಲು: ನಿಸ್ವಾರ್ಥ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾಯೋಜಿತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ವೃದ್ಧಾಶ್ರಮದಲ್ಲಿ ಶ್ರಮದಾನ ನಡೆಯಿತು.


ನಾಪೋಕ್ಲು, ಮಡಿಕೇರಿ, ಮರಗೋಡು ಘಟಕಗಳ ಸಹಯೋಗದಲ್ಲಿ ತನಲ್ ಕೂರ್ಗ್ ನೆರಳಿನ ಮನೆ ವೃದ್ಧಾಶ್ರಮದಲ್ಲಿ ಇತ್ತೀಚೆಗೆ 26 ಸ್ವಯಂ ಸೇವಕರು ತಮ್ಮೆಲ್ಲ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಮುಂಜಾನೆಯಿಂದ ಮುಸ್ಸಂಜೆವರೆಗೂ ವೃದ್ಧರಿಗೆ ಸಹಕಾರಿಯಾಗಬಲ್ಲಂತಹ ಹಲವಾರು ಕೆಲಸವನ್ನು ನಿರ್ವಹಿಸಿದರು.


3 ತಂಡವನ್ನು ಮಾಡಿಕೊಂಡು ಒಂದೊಂದು ತಂಡವೂ ಒಂದೊಂದು ರೀತಿಯ ಸೇವೆ ಮಾಡಿತು. ಒಂದು ತಂಡ ಮಳೆಗಾಲಕ್ಕೆ ಬೇಕಾಗುವ ಸೌದೆ ಕೆಲಸ, ಇನ್ನೊಂದು ತಂಡ ಆಶ್ರಮದ ಬದಿಯಲ್ಲಿ ಇದ್ದ ಬಿದಿರು ಮತ್ತು ಗಿಡಗಂಟಿ ಕಾಡುಗಳನ್ನು ಕಡಿದು ಮಳೆಗಾಲಕ್ಕೆ ಯಾವುದೇ ತೊಂದರೆ ಆಗದಂತಹ ಕೆಲಸ, ಮತ್ತೊಂದು ತಂಡ ಆಶ್ರಮದ ಸುತ್ತ ಹೂ ಮತ್ತು ಹಣ್ಣಿನ ಗಿಡ ನೆಡುವ ಕಾರ್ಯ ಮಾಡಿದವು.


ಈ ಸಂದರ್ಭ 3 ಶೌರ್ಯ ತಂಡಗಳ ಸಂಯೋಜಕಿಯರಾದ ಮಮತಾ, ದಿವ್ಯಾ, ರೋಹಿಣಿ, ಸದಸ್ಯರಾದ ಲತಾ, ಗೀತಾ, ರಮ್ಯಾ, ಹರೀಶ್, ಸುನೀತಾ, ಸುಂದರಿ, ಐತಪ್ಪ, ಧನಂಜಯ, ಕುಮಾರ್, ರಮೇಶ್, ಭಾಸ್ಕರ, ತಾರಾ ಮಣಿ, ಲೀಲಾ ಸೇಸಮ್ಮ, ಪ್ರೇಮಾ, ಮುನೀರ್, ಹರಿಣಾಕ್ಷಿ, ದಿಲೀಶ್, ಶಂಕರ್, ಶರವಣ, ಉಮಾಲಕ್ಷ್ಮೀ, ಗೀತಾ, ಚಂದ್ರಕಲಾ, ಆಶಾ ಇನ್ನಿತರರು ಉಪಸ್ಥಿತರಿದ್ದರು.