ಜಿಲ್ಲೆ

ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಳ ಆತಂಕಕಾರಿ ಸಂಗತಿ: ಡಾ. ಬಿ. ಪೂರ್ಣಿಮಾ ಕಳವಳ

ಹೊಳೆನರಸೀಪುರ: ಭಾರತೀಯ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಕ್ಯೆ ಹೆಚ್ಚಳ ಕಳವಳಕಾರಿ ಹಾಗೂ ಆತಂಕದ ಸಂಗತಿಯಾಗಿದೆ. ಇದು ಆರೋಗ್ಯವಂತ ಸಮಾಜದ ಲಕ್ಷಣವಲ್ಲ ಎಂದು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಬಿ. ಪೂರ್ಣಿಮಾ ಹೇಳಿದರು.

ಕಾಲೇಜಿನ ಸಮಾಜಶಾಸ್ತ್ರ ಹಾಗೂ ಕನ್ನಡ ವಿಭಾಗದ ವಿದ್ಯಾರ್ಥಿಗಳೊಂದಿಗೆ ನಗರದ ಕಾಮಧೇನು ವೃದ್ಧಾಶ್ರಮದ ಹಿರಿಯ ಜೀವಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂದೆ-ತಾಯಿ ಕಷ್ಟಪಟ್ಟು ಕೂಲಿ ಮಾಡಿ ಮಕ್ಕಳನ್ನು ಓದಿಸುತ್ತಾರೆ. ಆದರೆ ವಿದ್ಯಾವಂತರಾಗಿ ಬೆಳೆದ ಮೇಲೆ ತಮಗೆ ಜೀವನ ರೂಪಿಸಿಕೊಟ್ಟ ತಂದೆ-ತಾಯಿಯನ್ನು ಮನೆಯಿಂದ ಹೊರಗೆ ಹಾಕಿ ವೃದ್ಧಾಶ್ರಮಕ್ಕೆ ಸೇರಿಸುವುದರಲ್ಲಿ ಅರ್ಥವಿಲ್ಲ. ಹೆತ್ತವರ ಋಣ ತೀರಿಸುವುದು ಅಸಾಧ್ಯ ಎಂದರು.

ಜನ್ಮ ನೀಡಿದ ತಂದೆ-ತಾಯಿಗೆ ವೃದ್ಧಾಪ್ಯದಲ್ಲಿ ಅನ್ನ, ಬಟ್ಟೆ, ಆರೋಗ್ಯ, ಪ್ರೀತಿ ನೀಡದೆ ಇದ್ದರೆ ಯಾವ ದೇವಸ್ಥಾನಗಳಿಗೆ ಹೋಗಿ ಹೋಮ, ಹವನ ಮಾಡಿಸಿದರೂ ಪ್ರಯೋಜನವಿಲ್ಲ. ಜೀವನ ಸಾರ್ಥಕವಾಗಬೇಕಾದರೆ ಹೆತ್ತ ತಂದೆ-ತಾಯಿಯನ್ನು ಇಳಿವಯಸ್ಸಿನಲ್ಲಿ ಚೆನ್ನಾಗಿ ನೋಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಎಚ್.ವಿ. ಪೂರ್ಣಿಮಾ, ಸಹಾಯಕ ಪ್ರಾಧ್ಯಾಪಕ ಎನ್.ಬಿ. ಜಯಣ್ಣ, ಸಹಪ್ರಾಧ್ಯಾಪಕ ಎನ್. ವೆಂಕಟೇಶ್ ಹಾಜರಿದ್ದರು.