ಜಿಲ್ಲೆ

ವೃದ್ಧಾಶ್ರಮಕ್ಕೆ ಅಗತ್ಯ ವಸ್ತುಗಳ ರವಾನೆ

ಬೇಲೂರು: ಶಾಲೆಯ ವಿದ್ಯಾರ್ಥಿಗಳ ಪಾಲಕರು ಸ್ವಯಂ ಪ್ರೇರಿತರಾಗಿ ನಮ್ಮ ಸಂಸ್ಥೆಯೊಂದಿಗೆ ಅಗತ್ಯ ವಸ್ತುಗಳನ್ನು ವೃದ್ಧಾಶ್ರಮಕ್ಕೆ ನೀಡುತ್ತಿರುವುದು ಶ್ಲಾಘನೀಯ ಎಂದು ದಿವ್ಯ ವಿದ್ಯಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗೌಡೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.


ಚಿಕ್ಕಮಗಳೂರು ತಾಲೂಕಿನ ಕದ್ರಿಮಿದ್ರಿಯಲ್ಲಿರುವ ವೃದ್ಧಾಶ್ರಮಕ್ಕೆ ಬೇಲೂರು ಪಟ್ಟಣದ ದಿವ್ಯ ಆಂಗ್ಲ ಮಾಧ್ಯಮ ಶಾಲೆ ಪರವಾಗಿ ಸಂಸ್ಥೆ ಹಾಗೂ ಪಾಲಕರ ಸಹಕಾರದೊಂದಿಗೆ ಅಗತ್ಯ ವಸ್ತುಗಳನ್ನು ವಾಹನಗಳಲ್ಲಿ ಸಂಗ್ರಹಿಸಿ ಮಾತನಾಡಿದರು.


ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ವೃದ್ಧಾಶ್ರಮ, ಅನಾಥಾಶ್ರಮಗಳನ್ನು ಹೆಚ್ಚಾಗಿ ಕಾಣುತ್ತಿರುವುದು ವಿಪರ್ಯಾಸದ ಸಂಗತಿ. ಜತೆಗೆ ಅಲ್ಲಿ ಇರುವವರ ಸ್ಥಿತಿಯೂ ಅಷ್ಟಾಗಿ ಉತ್ತಮವಾಗಿಲ್ಲ. ಆಹಾರ ಪದಾರ್ಥ, ಅಗತ್ಯ ವಸ್ತುಗಳ ಕೊರತೆ ಹಾಗೂ ಅಲ್ಲಿರುವವರ ಅಸಹಾಯಕತೆ ಮನಗಂಡು ಏನಾದರೂ ಸಹಾಯ ಮಾಡಬೇಕೆಂದು ಸಂಸ್ಥೆಯಿಂದ ನಿಧರ್ರಿಸಿದ್ದು, ನಮ್ಮೊಂದಿಗೆ ವಿದ್ಯಾರ್ಥಿಗಳ ಪಾಲಕರು ಸಹ ಸಹಕಾರ ನೀಡಿದ್ದಾರೆ. ಇದರಿಂದ 4 ಕ್ವಿಂಟಾಲ್ ಅಕ್ಕಿ, 80 ಕೆಜಿ ತರಕಾರಿ, 46 ಕೆಜಿ ಅಡುಗೆ ಎಣ್ಣೆ, ಪೇಸ್ಟ್-ಬ್ರಶ್, ಸೋಪು, ಚಾಕಲೇಟ್, ಬಿಸ್ಕತ್ತು ಸೇರಿದಂತೆ ಹೆಚ್ಚು ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥ ಸಂಗ್ರಹವಾಗಿದೆ ಎಂದರು.


ಸಂಗ್ರಹವಾಗಿರುವ ಪದಾರ್ಥಗಳನ್ನು ನಮ್ಮ ಶಾಲಾ ವಾಹನಗಳಲ್ಲೇ ತುಂಬಿಕೊಂಡು ವಿದ್ಯಾರ್ಥಿಗಳೊಂದಿಗೆ ವೃದ್ಧಾಶ್ರಮಕ್ಕೆ ತೆರಳಿ ಹಸ್ತಾಂತರಿಸಲಾಗುವುದು. ಆ ಮೂಲಕ ಸ್ಥಿತಿಗತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದು. ಇದರಿಂದ ಮಕ್ಕಳಲ್ಲಿ ಗುರು-ಹಿರಿಯರ ಬಗ್ಗೆ ಗೌರವ ಮೂಡಲಿದೆ. ಇಂತಹ ಮಹತ್ತರ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲ ಪಾಲಕರು, ಯೋಜನೆ ರೂಪಿಸಿದ ಶಿಕ್ಷಕ ವರ್ಗಕ್ಕೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ದಿವ್ಯ ಆಂಗ್ಲ ಮಾಧ್ಯಮ ಶಾಲೆ ಪ್ರೌಢಶಾಲಾ ಮುಖ್ಯಶಿಕ್ಷಕ ಚೇತನ್ ಮಾತನಾಡಿ, ಮಕ್ಕಳಲ್ಲಿ ಗುರು-ಹಿರಿಯರು ಬಗ್ಗೆ ಗೌರವ ಹಾಗೂ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಸಂಸ್ಥೆ ಸಹಕಾರದೊಂದಿಗೆ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲಿನ ವೃದ್ಧರೊಂದಿಗೆ ಮಕ್ಕಳು ಕೆಲ ಸಮಯ ಕಳೆದರೆ ಅವರಿಗೂ ಸ್ವಲ್ಪ ಸಂತೋಷವಾಗುತ್ತದೆ. ಆದ್ದರಿಂದ ವೃದ್ಧಾಶ್ರಮಕ್ಕೆ ಅಗತ್ಯ ವಸ್ತುಗಳನ್ನು ನೀಡಿ ಕೆಲ ಸಮಯ ಅವರೊಂದಿಗಿದ್ದು, ಮುಂದೆ ಮಕ್ಕಳ ಮನಸ್ಸಿನಲ್ಲಿ ತಂದೆ, ತಾಯಿ ಸೇರಿದಂತೆ ಯಾರನ್ನೂ ಅನಾಥಾಶ್ರಮಕ್ಕೆ ಕಳುಹಿಸದಂತೆ ಅರಿವು ಮೂಡಿಸುವಲ್ಲಿ ಮುಂದಾಗಿದ್ದೇವೆ ಎಂದರು.