ಬಾಳೆಹೊನ್ನೂರು: ಹಿಂದಿನ ಕಾಲದಲ್ಲಿ ಕುಟುಂಬಗಳು ಒಗ್ಗೂಡಿ ಹಬ್ಬ ಆಚರಿಸುತ್ತಿದ್ದವು. ಇಂದಿನ ಜನರು ಪಾಲಕರನ್ನು ವೃದ್ಧಾಶ್ರಮಕ್ಕೆ ಕಳಿಸಿ ಹಬ್ಬ ಆಚರಿಸುತ್ತಿದ್ದಾರೆ ಎಂದು ಗೌರಿಗದ್ದೆ ದತ್ತಾವಧೂತ ವಿನಯ್ ಗುರೂಜಿ ಬೇಸರ ವ್ಯಕ್ತಪಡಿಸಿದರು. ವಿದ್ಯಾಗಣಪತಿ ಸೇವಾ ಸಮಿತಿ 64ನೇ ಗಣೇಶೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ಭಕ್ತಿ ವಿನಯ ಸಂಗಮ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಹಿಂದೆ ಹಬ್ಬದ ದಿನಗಳಲ್ಲಿ ಪಾಲಕರು, ಮಕ್ಕಳು ಒಟ್ಟುಗೂಡುತ್ತಿದ್ದರು. ಆದರೆ ಸದ್ಯ ತಂದೆ, ತಾಯಿ, ಮಕ್ಕಳು ಆಸ್ತಿಗಾಗಿ ಕೋರ್ಟ್ಗಳಲ್ಲಿ ಭೇಟಿಯಾಗುತ್ತಿದ್ದಾರೆಯೇ ಹೊರತು ಜೀವನದ ಉತ್ತಮ ಸಂದರ್ಭಗಳಲ್ಲಿ ಒಂದಾಗುತ್ತಿಲ್ಲ. ಇದು ಅತ್ಯಂತ ನೋವಿನ ಸಂಗತಿ. ತಂದೆ-ತಾಯಿಯನ್ನು ಆಶ್ರಮದಲ್ಲಿ ಬಿಟ್ಟು ಹಬ್ಬ ಮಾಡಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಗೌರವ ನೀಡುತ್ತಿಲ್ಲ. ಇಂಥ ಸಂದರ್ಭ ಬರಬಾರದು ಎಂದೇ ಹಿರಿಯರು ಗೌರಿ ಹಬ್ಬ, ನವರಾತ್ರಿಯನ್ನು ಆಚರಣೆಗೆ ತಂದಿದ್ದಾರೆ ಎಂದರು.
ಗಣೇಶೋತ್ಸವದಲ್ಲಿ ಅನ್ನ ಸಂತರ್ಪಣೆ, ಸಾಮೂಹಿಕ ವಿವಾಹ, ವೃದ್ಧರು, ಅಂಗವಿಕಲರಿಗೆ ಸಹಾಯಹಸ್ತ ಚಾಚುವ ಕೆಲಸಗಳು ಆಗಬೇಕಿವೆ ಎಂದು ಪ್ರತಿಪಾದಿಸಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಗಣೇಶೋತ್ಸವ ಆಚರಣೆ, ಅವಧೂತರ ಆಶೀರ್ವಾದದಿಂದ ಇವುಗಳೆಲ್ಲ ಕಡಿಮೆಯಾಗಬೇಕಿದೆ ಎಂದು ಮನವಿ ಮಾಡಿದರು.
ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಮಾತನಾಡಿ, ಗಣೇಶೋತ್ಸವಗಳು ಧಾರ್ವಿುಕ ಆಚರಣೆಗೆ ಸೀಮಿತವಾಗಿರದೆ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿ ಮಾಡಿದೆ. ಇದು ಗಣೇಶೋತ್ಸವದ ಮಹತ್ವವೂ ಹೌದು ಎಂದರು.