ಹಾಸನ: ವೃದ್ಧಾಶ್ರಮ ಸಂಸ್ಕೃತಿಯು ಪಾಶ್ಚಾತ್ಯ ಸಂಸ್ಕೃತಿಯಾಗಿದ್ದು, ಭಾರತದಲ್ಲಿ ನಿಧಾನವಾಗಿ ಹಬ್ಬಿ ಆಳವಾಗಿ ಬೇರೂರುತ್ತಿದೆ. ಇದು ಆರೋಗ್ಯಯುತ ಸಮಾಜದ ಲಕ್ಷಣವಲ್ಲ. ಮಕ್ಕಳು ತಮ್ಮ ಸಂತೋಷದ ಜೀವನಕ್ಕೆ ಹೆತ್ತವರು ಬೀದಿಪಾಲಾಗಿ ವೃದ್ಧಾಶ್ರಮ ಸೇರುತ್ತಿದ್ದಾರೆ. ಕೆಲವೊಮ್ಮೆ ಆಸ್ತಿ ಪಡೆದುಕೊಂಡ ನಂತರ ಮಕ್ಕಳೇ ವೃದ್ಧಾಶ್ರಮಕ್ಕೆ ಪಾಲಕರನ್ನು ಕರೆ ತಂದು ಬಿಡುತ್ತಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಜಿ.ಕೆ. ದಾಕ್ಷಾಯಿಣಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕಾಮಧೇನು ಸಹಕಾರಿ ವಿದ್ಯಾಶ್ರಮದ ಸಹಯೋಗದಲ್ಲಿ ಹಿರಿಯ ನಾಗರಿಕರಿಗೆ ಪಾಲಕರ ಮತ್ತು ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ- 2007 ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದಲಾದ ಕಾಲಘಟ್ಟಗಳಲ್ಲಿ ಹಿರಿಯ ನಾಗರಿಕರು ಮತ್ತು ಅವರ ಮಕ್ಕಳ ನಡುವೆ, ಹೊಸ ತಲೆಮಾರುಗಳ ನಡುವೆ ಆಗುತ್ತಿರುವ ಅಂತರಗಳಿಂದ ಹೊಸ ಹೊಸ ಸಮಸ್ಯೆಗಳು ಉದ್ಭವವಾಗುತ್ತಿವೆ. ವಯೋವೃದ್ಧರು ಎಲ್ಲ ಇದ್ದೂ ಅನಾಥರಾಗುತ್ತಿದ್ದಾರೆ. ಅನಿವಾರ್ಯವಾಗಿ ವೃದ್ಧಾಶ್ರಮಗಳತ್ತ ಮುಖ ಮಾಡುತ್ತಿದ್ದಾರೆ. ಭಾರತವು ಪ್ರಾಚೀನ ಕಾಲದಿಂದಲೂ ಕೂಡು ಕುಟುಂಬ ವ್ಯವಸ್ಥೆಯನ್ನು ಹೊಂದಿದ್ದು ಎಲ್ಲ ಸಂಬಂಧಗಳು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದವು. ಹಾಗಾಗಿ ಯಾರಲ್ಲೂ ಅನಾಥ ಪ್ರಜ್ಞೆ ಕಾಡುತ್ತಿರಲಿಲ್ಲ. ಪ್ರತಿಯೊಬ್ಬರ ಪಾಲನೆ ಪೋಷಣೆಯು ಕುಟುಂಬದೊಳಗೆ ನಡೆಯುತ್ತಿತ್ತು. ಪ್ರತಿ ಕುಟುಂಬವೂ ಧರ್ಮ ಸಂಸ್ಕಾರದಿಂದ ಕೂಡಿತ್ತು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಸನ್ನ ಮಾತನಾಡಿ, ಕುಟುಂಬದ ಕಡೆಗಣನೆಗೆ ಒಳಗಾಗಿ ವೃದ್ಧಾಶ್ರಮದಲ್ಲಿರುವ ನೀವುಗಳೇ ಪುಣ್ಯವಂತರು. ಹೊರಗಿರುವ ಎಷ್ಟೋ ಜನ ಕುಟುಂಬದಲ್ಲಿದ್ದರೂ ಅನಾಥರಂತೆ ಬದುಕನ್ನು ಸಾಗಿಸುತ್ತಿದ್ದಾರೆ. ನೀವು ಹೊರಗಿನ ಪ್ರಪಂಚದ ಸಂಬಂಧಗಳಿಗೆ ತಲೆ ಕೆಡಿಸಿಕೊಳ್ಳದೆ ನಿಶ್ಚಿಂತೆಯಿಂದ ಊಟ ನಿದ್ದೆ ಮಾಡಿದರೆ ಸಾಕು. ನಿಮ್ಮಿಂದ ನೆಮ್ಮದಿಯ ಜೀವನ ಸಾಧ್ಯವಿದೆ. ನಿಮ್ಮಂತ ಹಿರಿಯ ಚೇತನಗಳ ಮುಂದೆ ಮಾತನಾಡುವಷ್ಟು ಅನುಭವ ನನಗಿಲ್ಲ. ಒಂದು ವೇಳೆ ನಿಮ್ಮ ಮಕ್ಕಳು, ಮೊಮ್ಮಕ್ಕಳು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ತಮ್ಮನ್ನು ವಾಪಸ್ ಕರೆದುಕೊಂಡು ಹೋಗಲು ಬಂದಲ್ಲಿ ನೀವುಗಳು ಉದಾರತೆ ತೋರಿ ವೈಮನಸ್ಸು ಸಾಧಿಸದೆ ಅವರಿಗೆ ತಮ್ಮನ್ನು ನೋಡಿಕೊಳ್ಳಲು ಅವಕಾಶವನ್ನು ನೀಡಿ. ತಮ್ಮ ಬದುಕಿನ ಸಂಧ್ಯಾಕಾಲವನ್ನು ನೆಮ್ಮದಿಯಿಂದ ಕಳೆಯಿರಿ ಎಂದು ಹೇಳಿದರು.
ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಆರ್.ಅನುಪಮಾ ಮಾತನಾಡಿ, ಜಿಲ್ಲೆಯ ವಿವಿಧ ಕಡೆಗಳಲ್ಲಿ 5 ವೃದ್ಧಾಶ್ರಮಗಳು ಕೆಲಸ ನಿರ್ವಹಿಸುತ್ತಿದ್ದು ಕಾಮಧೇನು ಸಹಕಾರಿ ವಿದ್ಯಾಶ್ರಮವು ಉಳಿದವುಗಳಿಗಿಂತ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಸರ್ಕಾರದಿಂದ ಹಿರಿಯ ನಾಗರಿಕರಿಗೆ ಹಲವಾರು ಸಾಮಾಜಿಕ, ಆರ್ಥಿಕ, ಆರೋಗ್ಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಅದರಿಂದ ವಂಚಿತರಾದವರು ಇಲಾಖೆಯನ್ನು ಸಂಪರ್ಕಿಸಿ ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ವಕೀಲರಾದ ಬಿ.ಚಂದ್ರಶೇಖರ್ ಅವರು ಪಾಲಕರು ಮತ್ತು ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ 2007 ಕುರಿತಾಗಿ ಮಾತನಾಡಿ ಕಾಯ್ದೆಯು ಹಿರಿಯ ನಾಗರಿಕರ ಸಂರಕ್ಷಣೆಗೆ ಕಟಿಬದ್ಧವಾಗಿದೆ. ಆಸ್ತಿಯನ್ನು ಪಡೆದು ಪಾಲಕರನ್ನು ಬೀದಿಪಾಲು ಮಾಡುವ ಮಕ್ಕಳಿಂದ ವಾಪಸ್ ಪಾಲಕರಿಗೆ ಆಸ್ತಿಯನ್ನು ದೊರಕಿಸಿಕೊಡುವ ಕೆಲಸವನ್ನು ಉಪ ವಿಭಾಗಾಧಿಕಾರಿಗಳ ವಿಶೇಷ ನ್ಯಾಯಾಲಯವು ಮಾಡುತ್ತಿದೆ. ಮೂರು ತಿಂಗಳ ಒಳಗಾಗಿ ಅರ್ಜಿಯನ್ನು ವಿಲೇವಾರಿ ಮಾಡುವ ಅಧಿಕಾರವನ್ನು ಸದರಿ ನ್ಯಾಯಾಲಯ ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಮಧೇನು ಸಹಕಾರಿ ವಿದ್ಯಾಶ್ರಮದ ಅಧ್ಯಕ್ಷರಾದ ಮಾಧವ ಶೆಣೈ, ಸಮಿತಿಯ ನಿರ್ದೇಶಕರಾದ ಶಬ್ಬೀರ್ ಅಹ್ಮದ್, ಕೃಷ್ಣ ಅಯ್ಯಂಗಾರ್, ರಾಜು ಗೊರೂರು ಇತರರು ಉಪಸ್ಥಿತರಿದ್ದರು.