ಜಿಲ್ಲೆ

ವೃದ್ಧರ ಸ್ವಾವಲಂಬಿ ಬದುಕಿಗೆ ಅವಕಾಶ ನೀಡಿ

ಮೈಸೂರು: ವಯೋವೃದ್ಧರು ಸ್ವಾವಲಂಬಿ ಮತ್ತು ಸ್ವಾತಂತ್ರೃವಾಗಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಹೇಳಿದರು.

ಜೆಎಸ್‌ಎಸ್ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಜೆಎಸ್‌ಎಸ್ ವಿಕಾಸ ಸಂಪರ್ಕ ಕೇಂದ್ರ ಉದ್ಘಾಟನಾ ಕಾರ್ಯಕ್ರಮದ್ಲಲಿ ಮಾತನಾಡಿದರು.

ಜೆಎಸ್‌ಎಸ್ ವಿಕಾಸ ಕೇಂದ್ರದಲ್ಲಿ ವಯೋವೃದ್ಧರು ಸ್ವಾವಲಂಬಿ ಮತ್ತು ಸ್ವಾತಂತ್ರ್ಯದಿಂದ ಬದುಕಲು ತರಬೇತಿ ಮತ್ತು ಮಾಹಿತಿಯನ್ನು ನೀಡಲಾಗುತ್ತದೆ. ನಿವೃತ್ತಿಯ ನಂತರ ವೃದ್ಧರು ಸಮಾಜದೊಂದಿಗೆ ಬೆರೆಯಲು, ಗೌರವಯುತವಾದ ಜೀವನ ನಡೆಸಲು ಅವರಿಗೆ ಬೇಕಾಗುವ ಕೌಶಲ ತರಬೇತಿ, ಆರೋಗ್ಯದ ಕಾಳಜಿ ಹಾಗೂ ಹಿರಿಯರಿಗೆ ಸಿಗುವ ಸರ್ಕಾರದ ಸೌಲಭ್ಯಗಳ ಬಗ್ಗೆ ಇಲ್ಲಿ ತಿಳಿಸಲಾಗುತ್ತದೆ ಎಂದು ಹೇಳಿದರು.

ಅಂಕಿ ಅಂಶಗಳ ಪ್ರಕಾರ ಪ್ರಪಂಚದ ಜನಸಂಖ್ಯೆಯಲ್ಲಿ ಶೇ.12ರಷ್ಟು ಜನರು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿದ್ದಾರೆ. ಇದು 2030ಕ್ಕೆ ಇನ್ನೂ ಹೆಚ್ಚಾಗಬಹುದು. ಇಂದಿಗೂ ನಮ್ಮ ದೇಶದಲ್ಲಿ ಹಿರಿಯನಾಗರಿಕರಿಗೆ ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಜಾಗೃತಿಯ ಕೊರತೆ ಇದೆ. ಇದನ್ನು ಮನಗಂಡು ಇದರ ಸೌಲಭ್ಯ ಹಿರಿಯರಿಗೆ ಸಿಗಲಿ ಎಂಬ ಉದ್ದೇಶದಿಂದ ಜೆಎಸ್‌ಎಸ್ ಸಂಸ್ಥೆಯು ವಿಕಾಸ ಸಂಪರ್ಕ ಕೇಂದ್ರವನ್ನು ತೆರೆಯಲಾಗಿದೆ ಎಂದರು.

ಜತೆಗೆ ಸರ್ಕಾರದ ಹಿರಿಯನಾಗರಿಕರ ಸಹಾಯವಾಣಿಯು ಆಸ್ಪತ್ರೆ ಆವರಣದಲ್ಲಿ ಈಗಾಗಲೇ ಇದ್ದು, ಸಾರ್ವಜನಿಕರು ಮತ್ತು ಹಿರಿಯ ನಾಗರಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇನ್ಫೋಸಿಸ್‌ನ ತರಬೇತಿ ಮತ್ತು ಮೌಲ್ಯಮಾಪನ ಶಿಕ್ಷಣ ವಿಭಾಗದ ಮುಖ್ಯಸ್ಥ ತಿರುಮಲ ಆರೋಹಿ ಮಾಮುನೂರು ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಮತ್ತು ವಿಕಾಸ ಸಂಸ್ಥೆಯವರು ಹಿರಿಯ ನಾಗರಿಕರಿಗೆ ಭೌತಿಕ, ಸಾಮಾಜಿಕ ಮತ್ತು ಆರೋಗ್ಯದ ಕಾಳಜಿಯ ಬಗ್ಗೆ ಜಾಗೃತಿ ಮತ್ತು ಮಾಹಿತಿಯನ್ನು ನೀಡಲು ಸಂಪರ್ಕ ಕೇಂದ್ರವನ್ನು ಸ್ಥಾಪಿಸಿರುವುದು ಸಂತೋಷದ ಸಂಗತಿ. ಈ ಸೌಲಭ್ಯ ಎಲ್ಲ ನಾಗರಿಕರಿಗೂ ಸಿಗಬೇಕು. ಇನ್ನೂ ಹೆಚ್ಚಿನ ನೂಡಲ್ ಕೇಂದ್ರಗಳು ಸ್ಥಾಪನೆಯಾಗಬೇಕು. ಇದಕ್ಕೆ ನಮ್ಮ ಇನ್ಫೋಸಿಸ್ ಸಂಸ್ಥೆಯ ಬೆಂಬಲವಿದೆ ಎಂದರು.

ನಾರಾಯಣ ಹೆಲ್ತ್‌ನ ಕ್ಲಸ್ಟರ್ ಮತ್ತು ಕಾರ್ಪೋರೇಟ್ ವಿಭಾಗದ ನಿರ್ದೇಶಕ ಡಾ.ವಿಜಯಸಿಂಗ್ ಮತ್ತು ಕೆನರಾ ಬ್ಯಾಂಕ್ ಸಹಾಯಕ ಜನರಲ್ ಮ್ಯಾನೇಜರ್ ಚಂದನ್ ಕುಮಾರ್ ಚೌಧರಿ ಮಾತನಾಡಿ, ಹಿರಿಯ ನಾಗರಿಕರ ಆರೋಗ್ಯ ಕಾಳಜಿ ಬಹಳ ಪ್ರಮುಖವಾದುದು. ಇದರ ಜತೆಗೆ ಹಿರಿಯರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಜೆಎಸ್‌ಎಸ್ ಆಸ್ಪತ್ರೆಯು ತೆಗೆದುಕೊಂಡಿದೆ. ಇದನ್ನು ಹಿರಿಯ ನಾಗರಿಕರು ಸದುಪಯೋಗ ಪಡಿಸಿಕೊಳ್ಳಬೇಕು.ಕೆನರಾ ಬ್ಯಾಂಕ್ ಕೂಡ ಸಮಾಜ ಮತ್ತು ಹಿರಿಯರ ಜತೆಗೆ ಇರುತ್ತದೆ ಎಂದು ತಿಳಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಮಾತನಾಡಿ, ಜೆಎಸ್‌ಎಸ್ ಆಸ್ಪತ್ರೆಯು ರೋಗಿಗಳಿಗೆ ಉತ್ತಮ ಆರೋಗ್ಯಸೇವೆಯನ್ನು ನೀಡುತ್ತಿದೆ. ಹಿರಿಯರಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ.

ಹಿರಿಯ ನಾಗರಿಕರಿಗೆ ವಿಕಾಸ ಸಂಪರ್ಕ ಕೇಂದ್ರ ಮತ್ತು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವಿದ್ದು ಇವುಗಳು ಹಿರಿಯರ ಸಾಮಾಜಿಕ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು ಇನ್ನಿತರ ಸಮಸ್ಯೆಗಳ ಬಗ್ಗೆ ಗಮನಹರಿಸಿ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡಲಿದೆ ಎಂದರು.

ವಿಕಾಸ ಕೇಂದ್ರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕವಿತಾ ರೆಡ್ಡಿ, ವೈದ್ಯಕೀಯ ಅಧೀಕ್ಷಕ ಡಾ. ಸಿ.ಪಿ. ಮಧು, ವೃದ್ಧಾರೋಗ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರತಿಭಾ ಪರೇರ, ಸಹ ಪ್ರಾಧ್ಯಾಪಕಿ ಡಾ. ಶಿಲ್ಪ ಅವರೆಬೀಳ್, ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಇದ್ದರು.