ಜಿಲ್ಲೆ

ವೃದ್ಧನ ರಕ್ಷಿಸಿದ ಆರ್‌ಪಿಎಫ್ ಪೇದೆ

ದಾವಣಗೆರೆ: ದಾವಣಗೆರೆ ರೈಲು ನಿಲ್ದಾಣದಲ್ಲಿ ರೈಲು ಬರುವ ಹಂತದಲ್ಲೇ ಹಳಿ ದಾಟುತ್ತಿದ್ದ ವೃದ್ಧನನ್ನು ರೈಲ್ವೆ ಸುರಕ್ಷತಾ ಪಡೆಯ ಪೇದೆಯೊಬ್ಬರು ಸಮಯಪ್ರಜ್ಞೆಯೊಂದಿಗೆ ರಕ್ಷಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 10-45ರಲ್ಲಿ ಕೂಚುವೆಲ್ಲಿ-ಹುಬ್ಬಳ್ಳಿ ಮಾರ್ಗದ ವಾಸ್ಕೋ ರೈಲು ದಾವಣಗೆರೆ ಕಡೆಗೆ ಬರುತ್ತಿತ್ತು. ಇದನ್ನು ಗಮನಿಸದೆಯೇ ವೃದ್ಧರೊಬ್ಬರು ಫ್ಲಾಟ್‌ಫಾರಂನಿಂದ ಕೆಳಗಿಳಿದು ಹಳಿ ದಾಟಲು ಯತ್ನಿಸಿದ್ದಾರೆ.

ಅದೇ ವೇಳೆಗೆ ರೈಲು ಬರುತ್ತಿದ್ದಂತೆ ವೃದ್ಧ ಗಲಿಬಿಲಿಗೊಂಡಿದ್ದಾನೆ. ಅಲ್ಲಿದ್ದ ಸಾರ್ವಜನಿಕರೂ ವೃದ್ಧನತ್ತ ಧಾವಿಸಿದ್ದಾರೆ. ಇದನ್ನು ಗಮನಿಸಿದ ಆರ್‌ಪಿಎಫ್ ಪೇದೆ ಶಿವಾನಂದ ಜಾಣ್ಮೆ ಮೆರೆದು ಹಳಿಯಿಂದ ಬೇರೆಡೆ ಕರೆತಂದು ವೃದ್ಧನನ್ನು ರಕ್ಷಿಸಿದ್ದಾನೆ. ವೃದ್ಧನನ್ನು ರಂಗಪ್ಪ ಎಂದು ಗುರುತಿಸಲಾಗಿದೆ.

ರೈಲು ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯಾವಳಿ ಸೆರೆಯಾಗಿದೆ. ಶಿವಾನಂದನ ಕಾರ್ಯಕ್ಕೆ ಸಾರ್ವಜನಿಕರು, ರೈಲ್ವೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

---