ರಾಮನಗರ: ಬಿಡದಿಯ ಈಗಲ್‌ಟನ್ ರೆಸಾರ್ಟ್‌ನ ವಿಲ್ಲಾದಲ್ಲಿ ನಡೆದ ವೃದ್ಧ ದಂಪತಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿ ಆಗಿರುವ ಪೊಲೀಸರು, ಕೊಲೆ ಆರೋಪಿ ಮನೆ ಕೆಲಸದವನನ್ನು ಬಂಧಿಸಿದ್ದಾರೆ.
ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ಬಿಡದಿಯ ಈಗಲ್‌ಟನ್ ರೆಸಾರ್ಟ್‌ನ ವಿಲ್ಲಾದಲ್ಲಿ ವಾಸವಿದ್ದ ರಘುರಾಮ್ ರಾಜನ್ (65) ಮತ್ತು ಆಶಾರಾಜನ್ (60) ದಂಪತಿಯ ಮೃತ ದೇಹಗಳು ಮಂಗಳವಾರ ಪತ್ತೆಯಾಗಿದ್ದವು. ತನಿಖೆ ನಡೆಸಿದ ಬಿಡದಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಜೋಗಿಂದರ್ ಕುಮಾರ್ ಯಾದವ್(21) ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ರವಿಕುಮಾರ ಯಾದವ್ ತಲೆ ಮರೆಸಿಕೊಂಡಿದ್ದು ಈತನಿಗಾಗಿ ಶೋಧ ಮುಂದುವರಿದಿದೆ.
ಶ್ರೀಮಂತನಾಗುವ ಆಸೆ: ಬಂಧಿತ ಜೋಗಿಂದರ್ ಕುಮಾರ್ ಯಾದವ್ ತಂದೆ-ತಾಯಿ ಕಳೆದ 20 ವರ್ಷಗಳಿಂದಲೂ ಈಗಲ್‌ಟನ್ ಸುತ್ತ ಮುತ್ತ ಕೆಲಸ ಮಾಡಿಕೊಂಡಿದ್ದಾರೆ. ಕಳೆದ 3 ವರ್ಷಗಳ ಹಿಂದೆ ಬಿಡದಿಗೆ ಬಂದ ಜೋಗಿಂದರ್, ರಘುರಾಮ್ ರಾಜನ್ ಅವರ ಮನೆ ಕೆಲಸ ಮಾಡಿಕೊಂಡಿದ್ದ. ಒಂದು ತಿಂಗಳ ಹಿಂದೆ ರಘುರಾಜ್ ಅವರ ಮೊಬೈಲ್‌ನಿಂದ 70 ಸಾವಿರ ರೂ.ಗಳನ್ನು ತನ್ನ ಸ್ನೇಹಿತನ ಖಾತೆಗೆ ಗೂಗಲ್ ಪೇ ಮೂಲಕ ಅಕ್ರಮವಾಗಿ ಕಳುಹಿಸಿಕೊಂಡಿದ್ದ ಜೋಗಿಂದರ್, ಮತ್ತಷ್ಟು ಹಣ ಇದೆ ಇದನ್ನು ತಾನು ಪಡೆದುಕೊಳ್ಳಬೇಕು ಎಂದು ಯೋಜನೆ ಹೆಣೆದಿದ್ದ. ಈ ಹಿನ್ನೆಲೆಯಲ್ಲಿ ತನ್ನ ಸ್ನೇಹಿತ ರವಿಕುಮಾರ್ ಅವನೊಂದಿಗೆ ಸೇರಿಕೊಂಡು ವೃದ್ಧ ದಂಪತಿಯನ್ನು ಮಂಗಳವಾರ ಕೊಲೆ ಮಾಡಿದ್ದಾನೆ.
ವಾಂತಿ ಮಾಡಿಕೊಂಡಿದ್ದ: ಜೋಗಿಂದರ್ ಸ್ನೇಹಿತನ ಜತೆ ಸೋಮವಾರ ರಾತ್ರಿಯೇ ಯಾರಿಗೂ ತಿಳಿಯದಂತೆ ರಘುರಾಜ್ ಅವರ ಮನೆ ಸೇರಿಕೊಂಡಿದ್ದ. ನಂತರ ಮೇಲಿನ ಕೋಣೆಯಲ್ಲಿ ಮಲಗಿದ್ದ ರಘುರಾಜ್ ಅವರನ್ನು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಇದೇ ಮೊದಲ ಬಾರಿಗೆ ಕೊಲೆ ಮಾಡಿದ್ದ ಕಾರಣದಿಂದಾಗಿ ಸ್ಥಳದಲ್ಲಿಯೇ ವಾಂತಿಯನ್ನು ಸಹ ಕೊಲೆ ಆರೋಪಿ ಮಾಡಿಕೊಂಡಿದ್ದಾನೆ. ನಂತರ ಅಲ್ಲಿಯೇ ಇದ್ದ ವಿಸ್ಕಿ ಬಾಟಲ್ ತೆಗೆದು ಸ್ನೇಹಿತನೊಂದಿಗೆ ಕುಡಿದಿದ್ದು, ನಂತರ 5 ಗಂಟೆ ಸುಮಾರಿಗೆ ಕೆಳ ಮಹಡಿಯ ಕೋಣೆಯಲ್ಲಿ ಮಲಗಿದ್ದ ಆಶಾ ಅವರನ್ನು ಸುತ್ತಿಗೆಯಿಂದಲೇ ಹೊಡೆದು ಸಾಯಿಸಿದ್ದ.
ಹಣ ಸಿಗಲೇ ಇಲ್ಲ: ರಘುರಾಜ್ ಅವರ ಬಳಿ ಇರುವ ಹಣವನ್ನು ಸುಲಭವಾಗಿ ಲಪಟಾಯಿಸಬಹುದು ಎಂದು ಕೊಲೆ ಯೋಜನೆ ರೂಪಿಸಿದ್ದ ಜೋಗಿಂದರ್‌ಗೆ ಹಣ ಸಿಗಲೇ ಇಲ್ಲ. ಕೊಲೆ ನಂತರ ಅವರ ಮೊಬೈಲ್ ಮೂಲಕ ವಿವಿಧ ನಂಬರ್‌ಗಳಿಗೆ ಹಣವನ್ನು ಕಳುಹಿಸುವ ಪ್ರಯತ್ನ ನಡೆಸಿದ್ದಾನಾದರೂ ಪಾಸ್‌ವರ್ಡ್ ಮೂಲಕ ಖಾತೆಗಳು ಸುರಕ್ಷಿತವಾಗಿದ್ದ ಕಾರಣದಿಂದಾಗಿ ಹಣ ಕಳುಹಿಸಲು ಸಾಧ್ಯವಾಗಲಿಲ್ಲ. ಆದರೆ ಮನೆಯಲ್ಲಿದ್ದ 50 ಸಾವಿರ ರೂ.ಗಳನ್ನು ಜೇಬಿಗೆ ಇಳಿಸಿಕೊಂಡಿದ್ದು, ಮನೆಯ ಬಳಿ ಸೆಕ್ಯೂರಿಟಿ ಕಾವಲಿದ್ದ ಕಾರಣದಿಂದ ಒಡೆವೆಗಳನ್ನು ಸಾಗಿಸಲು ಸಾಧ್ಯವಾಗದೇ ಬರಿಗೈಯಲ್ಲಿ ವಿಲ್ಲಾ ಬಳಿಯೇ ಇರುವ ತನ್ನ ಮನೆಗೆ ವಾಪಸ್ ಆಗಿದ್ದ.
ಸಿಕ್ಕಿ ಬಿದ್ದರು: ಮಂಗಳವಾರ ಮಧ್ಯಾಹ್ನದ ವೇಳೆಗೆ ಕೊಲೆ ನಡೆದಿರುವುದು ಬೆಳಕಿಗೆ ಬರುತ್ತಿದ್ದಂತೆ ಇತ್ತ ಜೋಗಿಂದರ್ ತನ್ನ ಪತ್ನಿ ಹಾಗೂ ಸ್ನೇಹಿತನೊಂದಿಗೆ ಪರಾರಿಯಾಗಿದ್ದ. ಆದರೆ ಕಾರ್ಯಾಚರಣೆ ನಡೆಸಿದ ಬಿಡದಿ ಪೊಲೀಸರು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ನಲ್ಲಿ ಆರೋಪಿ ಹೋಗುತ್ತಿರುವ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಜೋಗಿಂದರ್‌ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ರವಿಕುಮಾರ್ ಪರಾರಿ ಆಗಿದ್ದಾನೆ.
ಹಣ ಇಲ್ಲ ಬಡವ ತಾನು ಮತ್ತಷ್ಟು ಹಣ ಲಪಟಾಯಿಸಬೇಕು ಎನ್ನುವ ದುರಾಲೋಚನೆಯಿಂದ ಮನೆ ಕೆಲಸ ಮಾಡಿಕೊಂಡಿದ್ದ ಜೋಗಿಂದರ್ ಕುಮಾರ್ ಯಾದವ್ ವೃದ್ಧ ದಂಪತಿಯನ್ನು ಸ್ನೇಹಿತನ ನೆರವಿನೊಂದಿಗೆ ಕೊಲೆ ಮಾಡಿದ್ದಾನೆ. ಓರ್ವ ಆರೋಪಿಯನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿಗೆ ಶೋಧ ಮುಂದುವರಿದಿದೆ. ಕೆ.ಸಂತೋಷ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗರ