ಜಿಲ್ಲೆ

ವೃತ್ತಿಯಲ್ಲಿ ಇಲ್ಲ ಮೇಲು-ಕೀಳು; ಮಾದಾರ ಸ್ವಾಮೀಜಿ

ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ವೃತ್ತಿಯೊಳಗೆ ಮೇಲು-ಕೀಳು, ಚಿಕ್ಕದು-ದೊಡದ್ಡು ಎಂಬ ತಾರತಮ್ಯ ಕೆಲವರಿಂದ ಸೃಷ್ಟಿಯಾಗುತ್ತಿದೆ. ಆದರೆ, ಕಷ್ಟಪಟ್ಟು ದುಡಿಯುವ ಯಾವ ಕಾಯಕವೂ ಅಪಮಾನಕ್ಕೆ ಒಳಗಾಗದು ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ ಮತ್ತು ವಿತರಕರ ಸಂಘದಿಂದ ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅನೇಕ ವರ್ಷಗಳ ಹಿಂದೆ ನಾನೂ ಪತ್ರಿಕೆ ಹಂಚಿದ್ದು, ನನ್ನನ್ನು ಒಳಗೊಂಡು ಪತ್ರಿಕಾ ವಿತರಕರು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಸ್ವಾಭಿಮಾನಕ್ಕೆ ಪೂರಕವಾದ ಅತ್ಯಮೂಲ್ಯ ವೃತ್ತಿಯಾಗಿದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧ ಎಂದರು.

ಒಕ್ಕೂಟದ ರಾಜ್ಯ ಅಧ್ಯಕ್ಷ ಶಂಭುಲಿಂಗ ಮಾತನಾಡಿ, ಒಕ್ಕೂಟದ ಪ್ರಯತ್ನದಿಂದ ಪಿಎಂ ಸ್ವಾನಿಧಿ ಯೋಜನೆ ಸೌಲಭ್ಯ ಸಿಕ್ಕಿದೆ. ವಿತರಕರ ಒಗ್ಗಟ್ಟು ಒಡೆಯುವ ಕೆಲಸ ಯಾರೂ ಮಾಡಬೇಡಿ. ಒಕ್ಕೂಟ ಮತ್ತು ಜಿಲ್ಲಾ ಸಂಘದ ಮೇಲೆ ವಿಶ್ವಾಸವಿಡಿ, ನಿಮ್ಮ ಸಮಸ್ಯೆಗಳಿಗೆ ಖಂಡಿತ ಪರಿಹಾರ ಸಿಗಲಿದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಎಸ್.ತಿಪ್ಪೇಸ್ವಾಮಿ ಮಾತನಾಡಿ, ಕರೋನಾ ಅವಧಿಯ ಜೀವ ಭಯದಲ್ಲೂ ಪತ್ರಿಕೆ ಉಳಿಸಿ, ಬೆಳೆಸುವ ಕೆಲಸ ವಿತರಕರು ಮಾಡಿದ್ದೇವೆ. ಆದರೆ, ನಮ್ಮನ್ನು ವಾರಿಯರ್ಸ್‌ ಆಗಿ ಗುರುತಿಸಲಿಲ್ಲ ಎಂದು ಬೇಸರಿಸಿದರು.

ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಈಗಾಗಲೇ ನೀಡಲಾಗಿರುವ ನಿವೇಶನಗಳು ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಜಿಲ್ಲಾಧಿಕಾರಿ ಅವರು ತಿಂಗಳೊಳಗೆ ಹಕ್ಕುಪತ್ರ ಕೊಡಿಸಬಹುದು ಎಂದು ತಿಳಿಸಿದರು.

ಪತ್ರಕರ್ತ ಎಂ.ಎನ್.ಅಹೋಬಳಪತಿ ಮಾತನಾಡಿ, ಪತ್ರಿಕಾ ವಿತರಕರಿಗೆ ರಾಜ್ಯದ ಯಾವ ಜಿಲ್ಲೆಯಲ್ಲೂ ನಿವೇಶನ ಸೌಲಭ್ಯ ಸಿಕ್ಕಿಲ್ಲ. ಆದರೆ, ಜಿ.ಎಚ್.ತಿಪ್ಪಾರೆಡ್ಡಿ ಅವರ ಸಹಕಾರದಿಂದ ಚಿತ್ರದುರ್ಗದಲ್ಲಿ ಮೊಟ್ಟಮೊದಲ ಬಾರಿಗೆ ದೊರೆತಿದೆ ಎಂದು ಹೇಳಿದರು.

ವಾರ್ತಾಧಿಕಾರಿ ತುಕಾರಾಂ ರಾವ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಇತರರಿದ್ದರು. ಮಂಜುನಾಥ್ ಸೊಂಡೆಕೊಳ ಪ್ರಾರ್ಥಿಸಿದರು. ಜಿ.ತಿಪ್ಪೇಸ್ವಾಮಿ ಇಂಗಳದಾಳ್ ಸ್ವಾಗತಿಸಿದರು.