ಜಿಲ್ಲೆ

ವೃತ್ತಿಪರತೆಯಲ್ಲಿ ಉತ್ತಮ ನಡತೆ ಮೈಗೂಡಿಸಿಕೊಳ್ಳಿ ; ಸಾಹೇ ವಿವಿ 10ನೇ ಘಟಿಕೋತ್ಸವದಲ್ಲಿ ಡಾ. ಬಿ.ಎಸ್.ಅಜಯ್‌ಕುಮಾರ್ ಸಲಹೆ

ತುಮಕೂರು : ಪದವಿ ಪಡೆದ ಬಳಿಕ ವೃತ್ತಿಪರತೆಯಲ್ಲಿ ಉತ್ತಮ ನಡತೆ, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಾಗ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯ ಎಂದು ಬೆಂಗಳೂರಿನ ಹೆಲ್ತ್ ಕೇರ್ ಗ್ಲೋಬಲ್ ಸಂಸ್ಥೆ ಅಧ್ಯಕ್ಷ ಡಾ. ಬಿ.ಎಸ್.ಅಜಯ್‌ಕುಮಾರ್ ಹೇಳಿದರು.

ನಗರದ ಹೊರವಲಯದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಎಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್ (ಸಾಹೇ) ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಸುಸ್ಥಿರ ಅಭಿವೃದ್ಧಿಗೆ ಕೇವಲ ಚಿನ್ನದ ಪದಕ ತೆಗೆದುಕೊಂಡು ಹೋಗುವುದಲ್ಲ. ಬದಲಾಗಿ ಪದಕ ಪಡೆದವರು ಸಮಾಜ ಹಾಗೂ ಶಿಕ್ಷಣ ಸಂಸ್ಥೆಯ ಪ್ರತಿಬಿಂಬವಾಗಿ ಹೊರಹೊಮ್ಮಬೇಕು ಎಂದು ಸಲಹೆಯಿತ್ತರು.

ರೋಗಿಗೆ ಧೈರ್ಯ, ಭರವಸೆ ಹಾಗೂ ನಂಬಿಕೆಗಳನ್ನು ಉತ್ತಮ ವೈದ್ಯನಾಗಿ ತುಂಬುವುದರಿಂದ ಬೇಗ ಗುಣಮುಖವಾಗಲು ಸಾಧ್ಯವಾಗುತ್ತದೆ. ರೋಗಿಯ ಮನಸ್ಥಿತಿ ಅರಿತು ಚಿಕಿತ್ಸೆ ನೀಡುವುದು ಹೆಚ್ಚು ಅಗತ್ಯವಾಗಿದೆ. ರೋಗಿಗಳು ಹೇಳುವುದನ್ನು ತಾಳ್ಮೆಯಿಂದ ಕೇಳಿ ಚಿಕಿತ್ಸೆ ನೀಡುವ ಗುಣವನ್ನು ವೈದ್ಯರು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಮೈಕ್ರೋಸಾಫ್ಟ್, ಗೂಗಲ್, ಅಡೋಬ್, ಪೆಪ್ಸಿ ಸೇರಿ ಹಲವಾರು ದಿಗ್ಗಜ ಸಂಸ್ಥೆಗಳಲ್ಲಿ ಭಾರತೀಯ ವಿದ್ಯಾರ್ಥಿಗಳೇ ಉನ್ನತ ಸ್ಥಾನದಲ್ಲಿ ಕಾರ್ಯಭಾರ ನಿರ್ವಹಿಸುತ್ತಿದ್ದಾರೆ. ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಇದೇ ರೀತಿ ಮುಂದೆ ಸಾಗಿ ದೇಶ ಹಾಗೂ ಸಂಸ್ಥೆ ಹೆಸರು ಇನ್ನಷ್ಟು ಪ್ರಜ್ವಲಿಸುವಂತೆ ಮಾಡಬೇಕು ಎಂದು ಅಜಯ್‌ಕುಮಾರ್ ಹೇಳಿದರು.

ಸಾಹೇ ವಿಶ್ವವಿದ್ಯಾಲಯ ಪ್ರಗತಿ ನೋಟದ ವರದಿಯನ್ನು ಸಾಹೇ ವಿವಿ ಉಪಕುಲಪತಿ ಡಾ.ಪಿ.ಬಾಲಕೃಷ್ಣ ಶೆಟ್ಟಿ ಮಂಡಿಸಿದರು. ಕುಲಸಚಿವ ಡಾ.ಎಂ.ಝಡ್.ಕುರಿಯನ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸುಶಿಲ್‌ಚಂದ್ರ ಮಹಾಪಾತ್ರ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪ್ರವೀಣ್ ಕುಡುವ, ಬೇಗೂರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ್, ಸಾಹೇ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕ ಡಾ.ಜಿ.ಎಂ.ಶಿವಕುಮಾರಪ್ಪ, ಡಾ.ಸುದೀಪ್ ಕುಮಾರ್, ಪರೀಕ್ಷಾಂಗ ಕುಲಸಚಿವ ಡಾ.ಕರುಣಾಕರ್, ಡೀನ್ ಡಾ.ಸಿದ್ದಪ್ಪ, ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ರವಿಪ್ರಕಾಶ್ ಮತ್ತಿತರರು ಇದ್ದರು.

17 ವಿದ್ಯಾರ್ಥಿಗಳಿಗೆ ಚಿನ್ನದ ಪದಕ : ಇಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಮುಗಿಸಿದ ಒಟ್ಟು 901 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು. 18 ಮಂದಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಇಂಜಿನಿಯರಿಂಗ್-10, ವೈದ್ಯಕೀಯ-4, ದಂತ ವೈದ್ಯಕೀಯ-3 ವಿದ್ಯಾರ್ಥಿಗಳು ರ‌್ಯಾಂಕ್ ಪಡೆದಿದ್ದು, ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಗೌಪ್ಯತೆ ಬೋಧಿಸಿದರು.

ಭಾರತದಂತಹ ರಾಷ್ಟ್ರದಲ್ಲಿ ಗ್ರಾಮೀಣ ಭಾಗದಲ್ಲಿರುವ ಶಿಕ್ಷಣ ಸಂಸ್ಥೆಗಳು ಹಲವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದ್ದು, ಇದಕ್ಕೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಉತ್ತಮ ನಿದರ್ಶನ ಎನಿಸಿದೆ. ಡಾ.ಬಿ.ಎಸ್.ಅಜಯ್‌ಕುಮಾರ್, ಅಧ್ಯಕ್ಷ, ಹೆಲ್ತ್ ಕೇರ್ ಗ್ಲೋಬಲ್ ಸಂಸ್ಥೆ