ಚಿತ್ರದುರ್ಗ: ಶಿಕ್ಷಕರ ವೃತ್ತಿಪರ ಸಾಮರ್ಥ್ಯಾಭಿವೃದ್ಧಿಗೆ ತರಬೇತಿಗಳು ಪೂರಕವಾಗಲಿವೆ ಎಂದು ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಹೇಳಿದರು.
ಡಯಟ್‌ನಲ್ಲಿ ಎಸ್‌ಎಸ್‌ಕೆ ಶಾಲಾ ಶಿಕ್ಷಣ ಇಲಾಖೆಯಿಂದ ಕೆಪಿಎಸ್ ಮತ್ತು ಪಿಎಂಶ್ರೀ ಶಾಲೆಗಳ ಭಾಷಾ (ಕನ್ನಡ, ಇಂಗ್ಲಿಷ್, ಹಿಂದಿ) ಶಿಕ್ಷಕರಿಗೆ ಮಂಗಳವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ತರಬೇತಿಯಲ್ಲಿ ಪಡೆದ ಅಂಶಗಳನ್ನು ಬೋಧನೆ ವೇಳೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಕಲಿಕಾ ಗುಣಮಟ್ಟ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಪ್ರತಿ ಮಗುವಿನ ಭಾಷಾ ಕೌಶಲಗಳ ಸಾಮರ್ಥ್ಯ ಗುರುತಿಸಬೇಕು. ಮಾತು, ಓದು, ಬರಹದಲ್ಲಿ ನೈಪುಣ್ಯತೆ ಪಡೆಯದಿರುವ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ಮೂಲಕ ಕಲಿಕೆಯಲ್ಲಿ ಸುಧಾರಣೆ ತರಬೇಕು ಎಂದು ಕಿವಿಮಾತು ಹೇಳಿದರು.
ಡಿಡಿಪಿಐ ಎಂ.ಆರ್. ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂವಹನಾ ಕೌಶಲ ಬೆಳೆಸಬೇಕು. ಸ್ಪಷ್ಟ ಓದು, ಶುದ್ಧ ಬರಹ ಸಂಬಂಧ ಹವ್ಯಾಸ ಹೆಚ್ಚಿಸಬೇಕು. ಶಿಕ್ಷಕರು ಶಾಲಾ ಹಂತದಲ್ಲಿ ಶೈಕ್ಷಣಿಕ ವರ್ಷದ ಕ್ರಿಯಾ ಯೋಜನೆಯಂತೆ ಪ್ರತಿ ತಿಂಗಳು ಚಟುವಟಿಕೆಗಳನ್ನು ನಿಗದಿತ ಸಮಯದಲ್ಲಿ ಆಯೋಜಿಸುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಶ್ರಮಿಸಬೇಕು ಎಂದು ಸೂಚಿಸಿದರು.
ಡಿವೈಪಿಸಿ ಸಿ.ಎಸ್. ವೆಂಕಟೇಶಪ್ಪ, ಹನುಮಂತಪ್ಪ, ಉಪನ್ಯಾಸಕ ಯು. ಸಿದ್ದೇಶಿ, ಎಪಿಸಿ ಮಂಜುನಾಥ್, ಕುಸುಮಾ, ತಾಂತ್ರಿಕ ಸಹಾಯಕ ಆರ್. ಲಿಂಗರಾಜು, ಶಿಕ್ಷಕರಿದ್ದರು.