ಬೇಲೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹಿಂದಿನ ಶಿಕ್ಷಣ ನೀತಿಯನ್ನು ಬದಲಾಯಿಸಲಿದೆ ಎಂದು ಬೇಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಲೋಕೇಗೌಡ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೇಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ನೂತನ ಶಿಕ್ಷಣ ನೀತಿ ಮಕ್ಕಳ ಮನೋವಿಕಾಸಕ್ಕೆ ಅನುಕೂಲವೇ ಅಥವಾ ಅನನುಕೂಲವೇ ಪರ-ವಿರೋಧ ಸಂಬಂಧ ತಾಲೂಕು ಮಟ್ಟದ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಶಿಕ್ಷಣವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ಗ್ರಾಮೀಣ, ನಗರ ಪ್ರದೇಶದಲ್ಲಿ ವೃತ್ತಿಪರ ತರಬೇತಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಸಮಗ್ರ ಚೌಕಟ್ಟಾಗಿದೆ. ಈ ನೀತಿಯು 2030ರ ವೇಳೆಗೆ ಭಾರತದ ಶಿಕ್ಷಣ ವ್ಯವಸ್ಥೆ ಪರಿವರ್ತಿಸುವ ಗುರಿ ಹೊಂದಿದೆ ಎಂದರು.
ಚರ್ಚಾ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ನೂತನ ಶಿಕ್ಷಣ ನೀತಿ ಜಾರಿಯಾಗಿರುವುದು ಉತ್ತಮವೆಂದು ವಾದಿಸುತ್ತಾ, ಹೊಸ ವ್ಯವಸ್ಥೆಯು ಮಗುವಿಗೆ ಮೊದಲ ಹಂತದಲ್ಲೇ ಉತ್ತಮ ಅಡಿಪಾಯದ ಶಿಕ್ಷಣ ಖಚಿತಪಡಿಸುತ್ತದೆ. ಆ ಮೂಲಕ ಮಗು ಮುಂದಿನ ಹಂತದಲ್ಲಿ ಶಿಕ್ಷಣ ಪಡೆಯಲು ಸಶಕ್ತವಾಗುವಂತೆ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ನೀತಿಯ ಅನುಸಾರ ಶಿಕ್ಷಣದ ಮೊದಲ ಹಂತದಲ್ಲಿ ಪ್ರಾಜೆಕ್ಟ್ ಆಧಾರಿತ ಕಲಿಕೆ, ಶಿಸ್ತುಬದ್ಧ ಕಲಿಕೆ, ಅನುಭವದ ಕಲಿಕೆ ಸೇರಿದಂತೆ ವಿದ್ಯಾರ್ಥಿಯು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ತದ ನಂತರದ ಶಿಕ್ಷಣದ ವರ್ಷಗಳಲ್ಲಿ, ವಿದ್ಯಾರ್ಥಿಗಳಿಗೆ ಎರಡನೇ ಬೋರ್ಡ್ ಪರೀಕ್ಷೆಯನ್ನು ಹೊಂದುವ ಆಯ್ಕೆ ನೀಡಿರುವುದು ಒಂದು ಸಕಾರಾತ್ಮಕ ಹೆಜ್ಜೆ ಎಂದು ಚರ್ಚಿಸಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪರವಾಗಿ ಮಾತನಾಡಿದ ಕಲ್ಪನಾ, ಮೋದಿಕಾ ಮೇಘಾ, ನಿಸರ್ಗ ಮಾತನಾಡಿ, ಕೆಲವು ಪಾಲಕರು ಹೆಣ್ಣು ಮಕ್ಕಳನ್ನು ಹೆಚ್ಚು ಓದಿಸುವುದಿಲ್ಲ. ಈ ನೂತನ ಶಿಕ್ಷಣ ನೀತಿಯಿಂದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಅನುಕೂಲವಿದೆ. ಒಟ್ಟಾರೇ ದೇಶದ ಸರ್ವತೋಮುಖ ಅಭಿವೃದ್ಧಿಗೆ ಅತ್ಯಗತ್ಯ ಉಪ ಕ್ರಮವಾಗಿದೆ ಎಂದು ನಾವು ಹೇಳಬಹುದು. ಆದಾಗ್ಯೂ, ಈ ನೀತಿಯ ಅನುಷ್ಠಾನವು ಅದರ ಯಶಸ್ಸನ್ನು ಹೆಚ್ಚು ನಿರ್ಧರಿಸುತ್ತದೆ. ಅದೇನೇ ಇದ್ದರೂ ಯುವ ಪ್ರಾಬಲ್ಯದ ಜನಸಂಖ್ಯೆಯೊಂದಿಗೆ, ಈ ಶಿಕ್ಷಣ ನೀತಿ ಸರಿಯಾಗಿ ಅನುಷ್ಠಾನವಾದರೆ ಭಾರತವು ನಿಜವಾಗಿಯೂ ಉತ್ತಮವಾದದ್ದನ್ನು ಸಾಧಿಸಬಹುದು ಎಂದು ತಿಳಿಸಿದಳು.
ವಿದ್ಯಾರ್ಥಿನಿ ವಿಜಯ ಲಕ್ಷ್ಮೀ ಚಂದನ್, ಮಮತಾ, ಜೀವನ್ ಸೇರಿದಂತೆ ಇನ್ನಿತರ ಕೆಲವು ವಿದ್ಯಾರ್ಥಿಗಳು, ನೂತನ ಶಿಕ್ಷಣದ ವಿರುದ್ಧವಾಗಿ ಮಾತನಾಡಿ, ನೋಟ್ ಬ್ಯಾನ್ ರೀತಿಯಲ್ಲಿ ಹೊಸ ಶಿಕ್ಷಣ ನೀತಿಯ ಬಗ್ಗೆ ಸಂಸತ್‌ನಲ್ಲಿ ಚರ್ಚಿಸದೆ ಅನುಷ್ಠಾನಗೊಳಿಸುವುದು ಸರಿಯಾದ ಕ್ರಮವಲ್ಲ. ಇದು ವಿದ್ಯಾರ್ಥಿಗಳ ಮೇಲೆ ಹೇರಿಕೆಯಾಗಲಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಮೂಲವಾದ ಶಿಕ್ಷಣ ಕ್ಷೇತ್ರದ ಬಗ್ಗೆ ಕೇಂದ್ರ ಸರ್ಕಾರ ಇಷ್ಟು ಹಗುರವಾದ ನಿರ್ಧಾರ ತೆಗೆದು ಕೊಳ್ಳಬಾರದು ಎಂದರು.
ತೀರ್ಪುಗಾರರಾಗಿ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಪ್ರಾಂಶುಪಾಲ ಪ್ರಶಾಂತ್‌ಕುಮಾರ್, ಹಿರಿಯ ಸಾಹಿತಿ ಶ್ರೀವತ್ಸ ಎಸ್.ವಟಿ, ವೈಡಿಡಿ ಕಾಲೇಜು ಪ್ರಾಧ್ಯಾಪಕ ರಾಘವೇಂದ್ರ, ಉಪನ್ಯಾಸಕ ದಯಾನಂದ್ ಕಾರ್ಯನಿರ್ವಹಿಸಿದರು. ಕಸಾಪ ಅಧ್ಯಕ್ಷ ಬಿ.ಎಲ್.ರಾಜೇಗೌಡ, ಗೌರವ ಸಲಹೆಗಾರ ಮಾ.ಶಿವಮೂರ್ತಿ, ಕಾರ್ಯದರ್ಶಿ ಬಿ.ಬಿ.ಶಿವರಾಜು, ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಚನ್ನೇಗೌಡ, ಧನಂಜಯ್ ಇದ್ದರು.