ಕೆ.ಎಂ.ದೊಡ್ಡಿ: ಶಿಕ್ಷಕರ ವೃತ್ತಿಪರ ಕೌಶಲಗಳನ್ನು ಹೆಚ್ಚಿಸುವ ವಿವಿಧ ತಂತ್ರಗಳು ಮತ್ತು ಸಾಧನಗಳನ್ನು ಒದಗಿಸಲು ಕಾರ್ಯಾಗಾರಗಳು ನಿರಂತರವಾಗಿ ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ವಿದ್ಯಾಸಂಸ್ಥೆಯ ಛೇರ‌್ಮನ್ ಮಧು ಜಿ.ಮಾದೇಗೌಡ ಅಭಿಪ್ರಾಯಪಟ್ಟರು.
ಭಾರತೀ ವಿದ್ಯಾಸಂಸ್ಥೆಯ ಡೈಮಂಡ್ ಜುಬಿಲಿ ಬ್ಲಾಕ್ ಆವರಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ ಮತ್ತು ಭಾರತೀ ಶಿಕ್ಷಣ ಮಹಾವಿದ್ಯಾಲಯ ಸಹಯೋಗದೊಂದಿಗೆ ‘ಸಮಗ್ರ ನಾವೀನ್ಯತೆ ಮತ್ತು ತರಗತಿ ನಿರ್ವಹಣೆಯಲ್ಲಿ ಶಿಕ್ಷಕರನ್ನು ರೂಪಿಸುವುದು’ ಕುರಿತು ಆಯೋಜಿಸಿದ್ದ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರ ನಿರಂತರ ಬೆಳವಣಿಗೆ, ಆಧುನಿಕ ಶಿಕ್ಷಣದ ನಿರಂತರವಾಗಿ ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಪರಿಣಾಮಕಾರಿ ಬೋಧನೆ ಮತ್ತು ಯಶಸ್ಸಿಗೆ ವಿದ್ಯಾರ್ಥಿಗಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು, ಬೆಳವಣಿಗೆ ಮತ್ತು ಯಶಸ್ಸಿಗೆ ಇಂತಹ ಕಾರ್ಯಾಗಾರಗಳು ಸಹಕಾರಿಯಾಗಿದೆ ಎಂದರು.
ಶಿಕ್ಷಕರ ವೃತ್ತಿಪರ ಕೌಶಲಗಳನ್ನು ಹೆಚ್ಚಿಸುವ ವಿವಿಧ ತಂತ್ರಗಳು ಮತ್ತು ಸಾಧನಗಳನ್ನು ಒದಗಿಸಲು ಅಧ್ಯಾಪಕರ ಕೆಲಸದ ಕಾರ್ಯಕ್ಷಮತೆಯನ್ನು ಸುಧಾರಣೆ, ಬೋಧನಾ ವಿನ್ಯಾಸಗಳನ್ನು ಅಳವಡಿಸಿಕೊಳ್ಳಲು ವೃತ್ತಿಪರ ಅಭಿವೃದ್ಧಿ ತರಬೇತಿ ಆಯೋಜಿಸಲಾಗಿದೆ. ಇದನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಇನ್ನೋವೇಟಿವ್ ಟೆಕ್ ಎಲ್ಜಿ ಸೋಲ್ಯೂಷನ್ ಲಿಮಿಟೆಡ್ ನಿರ್ದೇಶಕ ವಿ.ವೆಂಕಟ ಸುಬ್ಬಾರಾವ್ ಮಾತನಾಡಿ, ಸಮಗ್ರತೆ, ನಿಷ್ಠೆ, ಮ್ಯಾನೇಜಿಂಗ್ ಎಮೋಷನಲ್ ಆ್ಯಂಡ್ ಎಥಿಕ್ ಎನ್ ಟೀಚಿಂಗ್ ವಿಷಯ ಕುರಿತು ಮಾತನಾಡಿ, ವಿದ್ಯಾರ್ಥಿಗಳಿಗೆ ತಳಹದಿ ಮುಖ್ಯ. ಇದು ಸರಿಯಾದ ಕ್ರಮದಲ್ಲಿ ಆಗದಿದ್ದರೆ ಭವಿಷ್ಯದ ದಿನಗಳಲ್ಲಿ ಕಷ್ಟವಾಗುತ್ತದೆ. ಅಧ್ಯಾಪಕರನ್ನು ಗುಂಪುಗಳಾಗಿ ವಿಂಗಡಿಸಿ ವಿದ್ಯಾರ್ಥಿಗಳನ್ನು ಕೇಸ್ ಸ್ಟಡಿ ಹೇಗೆ ಮಾಡಬೇಕು ಎಂಬುದನ್ನು ವಿವರಿಸಿದರು.
ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್‌ನ ರೇವತಿ ಲೈಯರ್ ರಾಜಾರಾಮ್ ಅವರು, ಎಫೆಕ್ಟೀವ್ ಕ್ಲಾಸ್ ರೂಮ್ ಮ್ಯಾನೇಜ್ಮೆಂಟ್ ಎಂಬ ವಿಷಯದಲ್ಲಿ ಪರಿಣಾಮಕಾರಿ ತರಗತಿ ಸಂವಹನ ಕೌಶಲ, ತರಗತಿಯಲ್ಲಿ ಶಿಕ್ಷಕನಿಗೆ ಇರಬೇಕಾದ ಕೌಶಲಗಳು, ನಿಲ್ಲುವ ಭಂಗಿ, ಸನ್ನೆ-ಸಂಕೇತಗಳು, ಉತ್ತಮ ಉಡುಗೆಗಳ ಬಗ್ಗೆ ತಿಳಿಸಿದರು.
ಬೆಂಗಳೂರು ಸಿಎಂಆರ್ ವಿವಿಯ ಡಾ.ಬಿ.ಆರ್.ಬಾಲಾಜಿ ಅವರು ಎಫೆಕ್ಟಿವ್ ಕ್ಲಾಸ್ ರೂಮ್ ಕಮ್ಯುನಿಕೇಷನ್ ಸ್ಕಿಲ್, ಕೌಶಲಗಳ ಏಕೀಕರಣ ವಿಷಯ ಕುರಿತು ಮಾತನಾಡಿ, ನೀವು ಮಾಡುವ ಪಾಠವನ್ನು ವಿದ್ಯಾರ್ಥಿಯು ಜೀವನ ಪಯರ್ಂತ ನೆನಪಿಟ್ಟುಕೊಳ್ಳಬೇಕು. ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಾಗ ಮುಂದಿನ ದಿನಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಬೆಂಗಳೂರು ಎಂಇಎಸ್ ಶಿಕ್ಷಕರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಗಣೇಶ್ ಭಟ್ಟ ಅವರು ನವೀನ ಬೋಧನೆ ವಿಷಯ ಕುರಿತು ಮಾತನಾಡಿದರು. ಎಫ್‌ಡಿಪಿಯ ಮುಖ್ಯ ಸಂಯೋಜಕ ಡಾ.ಎಸ್.ಎಲ್.ಸುರೇಶ್, ಭಾರತೀ ಹೆಲ್ತ್ ಸೈನ್ಸ್‌ಸ್ ನಿರ್ದೇಶಕ ಡಾ. ತಮಿಜ್ ಮಣಿ, ಭಾರತಿ ಪಿಯು ಕಾಲೇಜಿನ ಆಡಳಿತಾಧಿಕಾರಿ ಜವರೇಗೌಡ, ಅಂಗ ಸಂಸ್ಥೆಯ ಪ್ರಾಂಶುಪಾಲರಾದ ಜಿ.ಬಿ.ಪಲ್ಲವಿ, ಸಿ.ವಿ.ಮಲ್ಲಿಕಾರ್ಜುನ್, ಪುಟ್ಟಸ್ವಾಮಿ, ಡಾ.ಜಿ.ಶಾಂತ ಕುಮಾರ್, ಡಾ.ಮಂಜು ಎಂ.ಜಾಕೋಬ್, ಎನ್.ರಾಚಪ್ಪಾಜಿ, ಡಾ.ಮಹೇಶ್ ಕುಮಾರ್ ಜಿ ಲೋನಿ, ರಾಜೇಂದ್ರ ರಾಜೇ ಅರಸ್, ಸಿ.ರಮ್ಯಾ, ಡಾ.ಪೂರ್ಣಿಮಾ, ಎಫ್‌ಡಿಪಿ ಸಂಯೋಜಕ ಬಿ.ಎನ್.ಕಿರಣ್, ಕೆ.ಪಿ.ಅಪರ್ಣಾ ಉಪಸ್ಥಿತರಿದ್ದರು.