ಹೂವಿನಹಡಗಲಿ: ಕನ್ನಡ ನಾಟಕ ಪರಂಪರೆಗೆ ರಾಜ್ಯದ ನಾಟಕ ರಚನೆಕಾರರು ಹೊಸ ರೂಪ ಕೊಟ್ಟಿದ್ದಾರೆ. ನಾಟಕ ಜೀವನೋತ್ಸಾಹ ಮೂಡಿಸುವ ಕಲೆಯಾಗಿದೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಾರಯ್ಯ ಎಂ. ಹೇಳಿದರು.
ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಪಟ್ಟಣದ ಜಿಬಿಆರ್ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕನ್ನಡ ನಾಟಕ ಸಾಹಿತ್ಯ ಪರಂಪರೆ’ ಕುರಿತು ಗುರುವಾರ ಮಾತನಾಡಿದರು. ದೇಶದಲ್ಲಿ ನಾಟಕ ಸಾಹಿತ್ಯ ಅನುವಾದ ಮತ್ತು ರೂಪಾಂತರದ ಮೂಲಕ ಹುಟ್ಟಿಕೊಂಡಿತು ಎಂದರು.
ಬ್ರಿಟೀಷರು ಭಾರತಕ್ಕೆ ಬಂದಾಗ ದೇಶೀಯ ವಿದ್ವಾಂಸರಿಂದ ಅನುವಾದ ಆರಂಭವಾಯಿತು. ನಾಟಕ ಓದುವುದಕ್ಕೂ, ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಂಸ್ಕೃತ, ಇಂಗ್ಲಿಷ್ ಹಾಗೂ ಗ್ರೀಕ್ ಸಾಹಿತ್ಯದ ಪ್ರೇರಣೆಯಿಂದ ಕನ್ನಡ ನಾಟಕ ಪರಂಪರೆ ಆರಂಭವಾಯಿತು ಎಂದು ತಿಳಿಸಿದರು.
ಉತ್ತರ ಕರ್ನಾಟಕದ ಬಹುತೇಕ ನಾಟಕ ಕಂಪನಿಗಳು ಹಾಗೂ ವೃತ್ತಿ ರಂಗಭೂಮಿ ಕಲಾವಿದರು ನಾಟಕಗಳಿಗೆ ಶಕ್ತಿ ತುಂಬವ ಕೆಲಸ ಮಾಡಿದ್ದಾರೆ. ನಾಟಕ ಅಭಿನಯ ಕಲೆಯಾದರೂ ಅದರಲ್ಲಿ ನಮ್ಮ ಸಂಸ್ಕೃತಿ ಅಡಕವಾಗಿದೆ. ನಾಟಕ ಎಂದರೆ ಮೂಲ ಪಾತ್ರದ ಅನುಕರಣೆ. ರಂಗಭೂಮಿಯತ್ತ ಯುವಕ, ಯುವತಿಯರು ಆಕರ್ಷಿತರಾಗಬೇಕಿದೆ. ಜೀವನೋತ್ಸಾಹ ಹೆಚ್ಚಿಸುವ ಹಾಗೂ ಸಂಸ್ಕೃತಿಯನ್ನು ಬೆಸೆಯುವ ಸೊಬಗು ರಂಗಭೂಮಿಗಿದೆ ಎಂದು ಮಾರಯ್ಯ ಹೇಳಿದರು.
ಪ್ರಭಾರ ಪ್ರಾಚಾರ್ಯ ಡಾ.ವೈ.ಚಂದ್ರಬಾಬು ಮಾತನಾಡಿ, ಇತ್ತೀಚಿನ ದಿನಗಳಲ್ಲಿನ ಯುವ ಸಮೂಹ ಮೊಬೈಲ್‌ಗಳ ಬಳಕೆಯಿಂದ ದೇಸಿ ಸಂಸ್ಕೃತಿ ಮರೆಯುತ್ತಿದ್ದಾರೆ. ನಾಟಕ ನೋಡುವುದು ಹಾಗೂ ನಾಟಕಗಳಲ್ಲಿ ಭಾಗವಹಿಸುವುದರಿಂದ ಜ್ಞಾನ ಹಾಗೂ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದರು.
ಐಕ್ಯೂಎಸಿ ಸಂಯೋಜಕಿ ಮಹಿಮಾ ಜ್ಯೋತಿ, ಸಹಾಯಕ ಪ್ರಾಧ್ಯಾಪಕರಾದ ಉಮಾದೇವಿ, ಡಾ.ಶರಣಪ್ಪ, ಮಾಬುಸಾಬ್, ಅನ್ನದಾನಪ್ಪ, ಮಧುಸೂದನ ಕೆ., ಬಸವರಾಜ ಪಿ. ವಿದ್ಯಾರ್ಥಿಗಳು ಇದ್ದರು.