ಜಿಲ್ಲೆ

ವೃಕ್ಷ, ತಾಯಿಯ ಪ್ರೀತಿ, ಕಾಳಜಿಯ ಸಂಕೇತ: ಡಾ.ಮುನಿಸ್ವಾಮಿಗೌಡ

ಹಾಸನ: ತಾಯಿಯ ಹೆಸರಿನಲ್ಲಿ ‘ಒಂದು ವೃಕ್ಷ’ ಅಭಿಯಾನ ತಾಯಿಯ ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿದೆ. ತಾಯಿ ಎಂದರೆ ಕೇವಲ ಜೀವ ನೀಡುವವಳಲ್ಲ, ಜೀವನದ ಪ್ರತಿಯೊಂದು ಹಂತದಲ್ಲಿ ನಮ್ಮನ್ನು ಬೆಂಬಲಿಸುವ, ಮಾರ್ಗದರ್ಶನ ಮಾಡುವ ವ್ಯಕ್ತಿಯಾಗಿದ್ದು, ಅವಳ ಹೆಸರಲ್ಲಿ ಒಂದು ವೃಕ್ಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹಾಸನ ಕೃಷಿ ಕಾಲೇಜಿನ ಡೀನ್ ಡಾ.ಮುನಿಸ್ವಾಮಿಗೌಡ ಅವರು ಹೇಳಿದರು.
ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿ ಕೃಷ್ಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ನಡೆಸುತ್ತಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ತಾಯಿಯ ಹೆಸರಲ್ಲಿ ‘ಒಂದು ವೃಕ್ಷ’ ಅಭಿಯಾನದಲ್ಲಿ ಮಾತನಾಡಿದ ಅವರು, ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಭಾರತ ಮತ್ತು ಜಗತ್ತಿನಾದ್ಯಂತ ಪ್ರತಿಯೊಬ್ಬರೂ ತಮ್ಮ ತಾಯಿಗೆ ಕೊಡುಗೆ ನೀಡಬೇಕು, ಹೀಗೆ ಪ್ರತಿಯೊಬ್ಬರೂ ತಮ್ಮ ತಾಯಿಗೆ ಗಿಡವೊಂದನ್ನು ನೀಡುವಂತೆ ಕರೆ ನೀಡಿದ್ದರು. ಆದ್ದರಿಂದ ಪ್ರಕೃತಿ ತಾಯಿಯನ್ನು ರಕ್ಷಿಸುವ ಮತ್ತು ಸುಸ್ಥಿರ ಜೀವನಶೈಲಿಗಾಗಿ ನಮ್ಮ ಬದ್ಧತೆಗೆ ಅನುಗುಣವಾಗಿ ಗಿಡವನ್ನು ನೆಟ್ಟಿದೇವೆ ಎಂದರು.
ಕಾರ್ಯಕ್ರಮದಲ್ಲಿ ಶಿಬಿರದ ಸಂಯೋಜಕ ಡಾ. ಎಂ.ಎಚ್. ಶಂಕರ, ಸಹಸಂಯೋಜಕರಾದ ಡಾ.ಪ್ರಮೋದ್, ಡಾ.ರೇಖಾ ಮತ್ತು ಡಾ.ಸದಾಶಿವನಗೌಡ, ಜೋಡಿಕೃಷ್ಣಾಪುರದ ಶಿಕ್ಷಕರಾದ ಸುಧಾಮಣಿ, ರಮೇಶ್, ಮಂಜೇಗೌಡ ಹಾಗೂ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.