ಕೆಂಭಾವಿ: ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಗಳು ಸೋಮವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿ ನೂತನವಾಗಿ ನಿರ್ಮಾಣವಾಗುತ್ತಿರುವ ಉತ್ತರಾದಿ ಮಠದ ಯತಿ ಚತುಷ್ಠಯರ ವೃಂದಾವನದ ಮತ್ತು ಕಲ್ಯಾಣ ಮಂಟಪದ ಕಾಮಗಾರಿ ಪರಿಶೀಲಿಸಿದರು.
ರಾತ್ರಿ ೧೦ರ ಸುಮಾರಿಗೆ ಕಲಬುರಗಿ ನಗರದಿಂದ ಆಗಮಿಸಿದ ಶ್ರೀಗಳನ್ನು ಭಕ್ತರು ಜೈಘೋಷದೊಂದಿಗೆ ಬರಮಾಡಿಕೊಂಡರು. ೫೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎರಡೂ ಕಟ್ಟಡ ವೀಕ್ಷಿಸಿ ಕಾಮಗಾರಿ ಬಗ್ಗೆ ಇಂಜಿನೀಯರ್ ಗುರುರಾಜ ದೇಶಪಾಂಡೆ ಅವರಿಂದ ಸಮಗ್ರ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ವೃಂದಾವನ ಪ್ರತಿಷ್ಠಾಪನೆ ಸ್ಥಳವನ್ನು ವೀಕ್ಷಣೆ ಮಾಡಿ, ಚಾತುರ್ಮಾಸ್ಯದ ನಂತರ ವೃಂದಾವನ ಪ್ರತಿಷ್ಠಾಪನೆಗೆ ಮುಹೂರ್ತ ನಿಗದಿ ಮಾಡುವುದಾಗಿ ತಿಳಿಸಿದರು. ನಂತರ ನಾಡಿಗೇರ ಹನುಮಂತ ದೇವರಿಗೆ ಮಹಾಮಂಗಳಾರತಿ ಮಾಡಿದರು. ನೆರೆದಿದ್ದ ಭಕ್ತರಿಗೆ ತಪ್ತ ಮುದ್ರಾಧಾರಣೆ ಫಲಮಂತ್ರಾಕ್ಷತೆ ನೀಡಿ ಅನುಗ್ರಹಿಸಿ ಯಾದಗಿರಿ ನಗರಕ್ಕೆ ಪ್ರಯಾಣ ಬೆಳೆಸಿದರು.
ಜಯಸತ್ಯಪ್ರಮೋದ ಸೇವಾ ಸಂಘದ ಅಧ್ಯಕ್ಷ ವಾಮನರಾವ ದೇಶಪಾಂಡೆ, ಉಪಾಧ್ಯಕ್ಷ ಬಾಳಕೃಷ್ಣರಾವ ಕುಲಕರ್ಣಿ, ಕಾರ್ಯದರ್ಶಿ ತಿರುಮಲಾಚಾರ್ಯ ಜೋಷಿ, ಪ್ರಹ್ಲಾದಾಚಾರ್ಯ ಜೋಷಿ, ಜಯಾಚಾರ್ಯ ಪುರೋಹಿತ, ಮೋಹನರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ಶೇಷಗಿರಿರಾವ ಕುಲಕರ್ಣಿ, ವೆಂಕಟೇಶ ನಾಡಿಗೇರ, ಡಾ.ಹಳ್ಳೇರಾವ ಕುಲಕರ್ಣಿ, ಡಾ.ಗಿರೀಶ ಕುಲಕರ್ಣಿ, ಮಲ್ಲಾರಾವ ಕುಲಕರ್ಣಿ ಇತರರಿದ್ದರು.