ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ನೆಲಮಂಗಲ
ಹೆದ್ದಾರಿಗಳಲ್ಲಿ ಅಪಾಯಕಾರಿ ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡರ ಕಿರಿಕಿರಿಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಪುಂಡರಿಂದ ಬೈಕ್ ಕಸಿದುಕೊಂಡು ಅವರ ಸಮ್ಮುಖದಲ್ಲೇ ಮೇಲ್ಸೇತುವೆಯಿಂದ ಕೆಳಗೆ ಎಸೆದ ಪ್ರಕರಣ ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಶನಿವಾರ ನಡೆದಿದೆ.
ಪ್ರಕರಣ ಸಂಬಂಧ ನೆಲಮಂಗಲ ತಾಲೂಕು ಸಂಚಾರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಬೈಕ್ ವಶಕ್ಕೆ ಪಡೆದಿದ್ದಾರೆ, ಪರಾರಿಯಾಗಿರುವ ವೀಲಿಂಗ್ ಪುಂಡರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಘಟನೆಯಲ್ಲಿ ಬೈಕ್ ಎಸೆದ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?: ವಾರಾಂತ್ಯದ ಹಿನ್ನೆಲೆಯಲ್ಲಿ ಕೆಲ ಪುಂಡರ ಗುಂಪು ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ವೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದರು. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಲವು ವಾಹನಗಳ ಹಿಂದೆ ಮುಂದೆ ಅಪಾಯಕಾರಿಯಾಗಿ ಬೈಕ್ ಚಾಲನೆ ಮಾಡಿ ಆತಂಕ ಹುಟ್ಟಿಸುತ್ತಿದ್ದರು. ಇದರಿಂದ ಬೇಸತ್ತ ಸಾರ್ವಜನಿಕರು ಬೈಕ್ ವೀಲಿಂಗ್ ಮಾಡುತ್ತಿದ್ದವರನ್ನು ಬೆನ್ನಟ್ಟಿದ್ದರು. ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿ ಬಳಿಯ ಮೇಲ್ಸೇತುವೆ ಬಳಿ ಪುಂಡರಿಂದ ದ್ವಿಚಕ್ರವಾಹನವನ್ನು ಕಿತ್ತುಕೊಂಡು ಅವರ ಕಣ್ಣೆದುರೆ ಮೇಲ್ಸೇತುವೆಯಿಂದ ಸರ್ವೀಸ್ ರಸ್ತೆಗೆ ಎಸೆದಿದ್ದಾರೆ. ದಿಢೀರನೆ ನಡೆದ ಪ್ರಕರಣದಿಂದ ಕಕ್ಕಾಬಿಕ್ಕಿಯಾದ ಪುಂಡರು ಬೈಕ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ವಿಶೇಷ ಕಾರ್ಯಾಚರಣೆ: ಬೈಕ್ ವೀಲಿಂಗ್ ಪ್ರಕರಣದಿಂದ ಎಚ್ಚೆತ್ತಿರುವ ಜಿಲ್ಲಾ ಪೊಲೀಸರು ಪ್ರತಿ ವಾರಾಂತ್ಯದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲು ಮುಂದಾಗಿದ್ದಾರೆ. ಅಲ್ಲದೆ ವಾರದ ಇನ್ನಿತರ ದಿನಗಳಲ್ಲೂ ಪೊಲೀಸ್ ಗಸ್ತು ಹೆಚ್ಚಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ರವಾನಿಸಿದ್ದಾರೆ. ಕಾನೂನಿನಡಿ ಇಂಥ ಪ್ರಕರಣ ಕಂಡುಬಂದರೆ ಚಾಲನಾ ಪರವಾನಗಿ ರದ್ದುಪಡಿಸಿ ಪಾಲಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೈಕ್ ಎಸೆದವರ ವಿರುದ್ಧವೂ ಎ್ಐಆರ್: ಪುಂಡರ ಹಾವಳಿಯಿಂದ ಬೇಸತ್ತ ಸಾರ್ವಜನಿಕರು ಬೈಕ್ ಅನ್ನು ಮೇಲ್ಸುತುವೆಯಿಂದ ಕೆಳಗೆ ಎಸೆದಿದ್ದಾರೆ. ಆದರೆ ಇದು ಕಾನೂನಿನಡಿ ಅಪರಾಧವಾಗಲಿದೆ, ಈ ರೀತಿ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಎಚ್ಚರಿಕೆ ರವಾನಿಸಿರುವ ಪೊಲೀಸರು ಬೈಕ್ ಸವಾರರು ಹಾಗೂ ಬೈಕ್ ಎಸೆದ ಸಾರ್ವಜನಿಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಜನ ಕಾನೂನು ಕೈಗೆ ತೆಗೆದುಕೊಳ್ಳುವುದು ತಪ್ಪು, ಈ ಹಿನ್ನೆಲೆಯಲ್ಲಿ ಬೈಕ್ ಎಸೆದವರ ಮೇಲೆಯೂ ಎ್ಐಆರ್ ದಾಖಲಿಸಲಾಗುವುದು. ಇಂಥ ಪ್ರಕರಣ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಬೈಕ್ ಮಾಲೀಕ ಯಾರು, ಅದನ್ನು ಬಳಸುತ್ತಿದ್ದ ಹುಡುಗರು ಯಾರು ಎಂಬುದನ್ನು ಪತ್ತೆ ಹಚ್ಚಲಾಗಿದ್ದು, ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಬೈಕ್ ಸವಾರ ಹಾಗೂ ಸಾರ್ವಜನಿಕರು ಇಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದೆ.ಸಿ.ಕೆ.ಬಾಬಾ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ