ಕೆ.ಆರ್.ಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ತಾಲೂಕು ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ವಿ.ಎಸ್.ಧನಂಜಯ ಅವರನ್ನು ನಿಖಿಲ್ ಕುಮಾರಸ್ವಾಮಿ, ಎಚ್.ಟಿ.ಮಂಜು ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು. 
ಜಿಲ್ಲೆ

ವೀರಶೈವ ಸಮುದಾಯಕ್ಕೆ ನಾರಾಯಣಗೌಡರಿಂದ ಅನ್ಯಾಯ

ಕೆ.ಆರ್.ಪೇಟೆ: ಪಕ್ಷದ ವರಿಷ್ಠರು, ಎಲ್ಲ ಮುಖಂಡರ ತೀರ್ಮಾನದಂತೆ ಎಚ್.ಟಿ.ಮಂಜು ಅವರನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಪಟ್ಟಣದಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ವಿ.ಎಸ್.ಧನಂಜಯ್ ಜೆಡಿಎಸ್ ಸೇರ್ಪಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾರಾಯಣಗೌಡರಿಗೆ ಟಿಕೆಟ್ ಕೊಡದಂತೆ ವಿರೋಧವಿತ್ತು. ಪಕ್ಷ ತಾಯಿ ಇದ್ದಂತೆ. ತಾಯಿಗೆ ಮೋಸ ಮಾಡಿದ ವ್ಯಕ್ತಿ ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಳ್ಳಲು ಆಗಲಿಲ್ಲ. ಅಧಿಕಾರ ದಾಹ, ದುಡ್ಡಿನ ಮೋಹಕ್ಕೆ ಒಳಗಾಗಿ ಪಕ್ಷಾಂತರವಾದರು. ಕುಮಾರಣ್ಣನ ಸರ್ಕಾರ ಉರುಳಿಸಲು ನೀವು ಕೈಜೋಡಿಸಿದಿರಿ. ಸಚಿವರಾಗಿ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ನಾರಾಯಣಗೌಡರ ವಿರುದ್ಧ ಕಿಡಿಕಾರಿದರು.

ವೀರಶೈವ ಸಮುದಾಯಕ್ಕೆ ನಾರಾಯಣಗೌಡರಿಂದ ಅನ್ಯಾಯವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಹೇಳಿದರೂ ಸ್ಪಂದಿಸುತ್ತಿಲ್ಲ ಎನ್ನುತ್ತಿದ್ದಾರೆ. ವೀರಶೈವರನ್ನು ಬಿಜೆಪಿ ಮತ್ತು ನಾರಾಯಣಗೌಡ ಅಗೌರವವಾಗಿ ನಡೆಸಿಕೊಂಡಿದ್ದಾರೆ. ನಾವು ನಿಮಗೆ ಒಂದು ಮಾತು ಕೊಡುತ್ತೇವೆ. ಚುನಾವಣೆಗಾಗಿ ಮಾತ್ರ ನಮ್ಮ ನಿಮ್ಮ ಪ್ರೀತಿ ವಿಶ್ವಾಸ ಅಲ್ಲ. ಕೊನೆವರೆಗೂ ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದರು.
ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ಮಾತನಾಡಿ, ನಮ್ಮಿಂದ ಹೋದವರು ಟೋಪಿ ಹಾಕಿ ಹೋದರು. ಅಭಿವೃದ್ಧಿ ಮಾಡುತ್ತೀನಿ ಎಂದವರು ಈಗ ಮಾಡುತ್ತಿರುವುದು ಏನು? ಎಲ್ಲರಿಗೂ ನಾಮ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಧನಂಜಯಕುಮಾರ್ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯಕ್ಕೆ ನಾರಾಯಣಗೌಡರಿಂದ ಏನೂ ಪ್ರಯೋಜನವಾಗಿಲ್ಲ. ಉಪ ಚುನಾವಣೆಯಲ್ಲಿ ಶೇ.95ರಷ್ಟು ಮತವನ್ನು ಬಿಜೆಪಿಗೆ ಕೊಟ್ಟೆವು. ಬಸವೇಶ್ವರ ಭವನಕ್ಕೆ 3 ಕೋಟಿ ರೂ. ಅನುದಾನ ಬಂದು 3 ವಷರ್ ಆಗಿದೆ. ಇದುವರೆಗೂ ಭೂಮಿಪೂಜೆ ಮಾಡಲಿಲ್ಲ. ನಮ್ಮ ಸಮುದಾಯದ ಗ್ರಾಮಗಳ ರಸ್ತೆ ಮಾಡಲಿಲ್ಲ ಎಂದು ದೂರಿದರು.

ಧನಂಜಯ್ ನೇತೃತ್ವದಲ್ಲಿ ಹಲವರು ಪಕ್ಷ ಸೇರ್ಪಡೆಗೊಂಡರು. ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಜಾನಕೀರಾಂ, ಬಿ.ಎಂ.ಕಿರಣ್, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಶೆಟ್ಟಿನಾಯಕನ ಕೊಪ್ಪಲು ಸೋಮಶೇಖರ್ ಇದ್ದರು.