ಬಸವಕಲ್ಯಾಣ: ಬಹುಸಂಖ್ಯೆಯಲ್ಲಿರುವ ರಾಜ್ಯದ ವೀರಶೈವ ಲಿಂಗಾಯತರು ನಾವೆಲ್ಲರೂ ಒಂದು ಎಂಬುದನ್ನು ತೋರಿಸಬೇಕಾದ ಸಮಯ ಬಂದಿದ್ದು, ಒಗ್ಗಟ್ಟಿನಿಂದ ಹೋಗಬೇಕಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಭಾನುವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಏಳನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವ ಧರ್ಮಕ್ಕೆ ಜಯವಾಗಲಿ ಎಂದು ಜಗದ್ಗುರು ರೇಣುಕಾಚಾರ್ಯ ಬೋಧಿಸಿದರೆ, ದಯವಿಲ್ಲದ ಧರ್ಮ ಯಾವುದಯ್ಯ ಎಂದು ಬಸವಣ್ಣ ಹೇಳಿದ್ದಾರೆ. ಬಸವ ಭೂಮಿ ಕಲ್ಯಾಣದಲ್ಲಿ ರಂಭಾಪುರಿ ಜಗದ್ಗುರುಗಳು ದಸರಾ ಧರ್ಮ ಸಮ್ಮೇಳನ ಮೂಲಕ ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಮಾರ್ಗದರ್ಶನದಂತೆ ಎಲ್ಲರೂ ಸ್ವಪ್ರತಿಷ್ಠೆ ಬಿಟ್ಟು ಸಮಾಜದ ಒಳಿತಿಗಾಗಿ ಒಂದಾಗಬೇಕು ಎಂದು ಮನವಿ ಮಾಡಿದರು.
ಯಾವುದೋ ಹೆಸರಿನಲ್ಲಿ ಜಾತಿಗಣತಿಗೆ ರಾಜ್ಯ ಸರ್ಕಾರ ಹೊರಟಿದೆ. ಸಮಾಜಕ್ಕೆ ಒಳಿತಾಗಬೇಕು, ತಪ್ಪಾದರೆ ಸಮಾಜ ಕ್ಷಮಿಸದು ಎಂದು ಪರೋಕ್ಷವಾಗಿ ಸರ್ಕಾರಕ್ಕೆ ಎಚ್ಚರಿಸಿದ ಸಚಿವ ಸೋಮಣ್ಣ, ೨೦೨೫ರ ಜ.೧ರಿಂದ ಕೇಂದ್ರ ಸರ್ಕಾರ ಜನಗಣತಿ ನಡೆಸಿದಾಗಲೇ ವಾಸ್ತವ ಗೊತ್ತಾಗಲಿದೆ ಎಂದರು.
ಈ ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬೆಳೆ ಹಾನಿಯಾಗಿದೆ. ಕೇಂದ್ರದ ಕೃಷಿ ಸಚಿವರೊಂದಿಗೆ ಚರ್ಚಿಸಿ ಸಮೀಕ್ಷೆಗೆ ತಂಡ ಕಳುಹಿಸಲಾಗುವುದು. ರಾಜ್ಯ ಸರ್ಕಾರ ತಕ್ಷಣ ಅನ್ನದಾತರ ನೆರವಿಗೆ ಧಾವಿಸಬೇಕು ಎಂದರು.
ಸುಂದರವಾದ ಉಡುಗೆ ತೊಡುಗೆಗಳಿಂದ ವ್ಯಕ್ತಿತ್ವ ಬದಲಿಸಿಕೊಳ್ಳಬಹುದು ಹೊರತು, ಬದುಕು ಬದಲಿಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕಾರದಿಂದ ಬದುಕು ಶ್ರೀಮಂತಗೊಳ್ಳಲು ಸಾಧ್ಯ. ಹೃದಯವಂತಿಕೆ ಇಲ್ಲದೆ ಬುದ್ಧಿವಂತಿಕೆ ಎಷ್ಟೇ ಇದ್ದರೂ ಪ್ರಯೋಜನವಿಲ್ಲ. ಬುದ್ಧಿಗಿಂತ ಹೃದಯವಂತಿಕೆ ಬಹುಮುಖ್ಯ. ಶ್ರೀ ರಂಭಾಪುರಿ ಜಗದ್ಗುರುಗಳ ಆದರ್ಶ ಗುರಿ ಮತ್ತು ಬೋಧನೆ ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ೧೨ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಮಾಡಿದ ವಿಶೇಷ ನೆಲ ಇದು. ಯುವ ಪೀಳಿಗೆಗೆ ಧರ್ಮ ಸಂದೇಶ ಸಾರಬೇಕಾದ ಅಗತ್ಯವಿದೆ. ವೀರಶೈವ ಲಿಂಗಾಯತ ಧರ್ಮದ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಬಗ್ಗೆ ತಿಳಿಸಿಕೊಡುವ ಜತೆಗೆ ಲಿಂಗಪೂಜೆ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು, ಮಾಜಿ ಸಂಸದರೂ ಆದ ಗೌಡಗಾಂವ ಹಿರೇಮಠದ ಶ್ರೀ ಡಾ.ಜಯಸಿದ್ಧೇಶ್ವರ ಶಿವಾಚಾರ್ಯ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಶರಣು ಸಲಗರ, ಸಾಹಿತ್ಯ ಸಂಶೋಧಕ ಡಾ.ಎ.ಸಿ. ವಾಲಿ ಮಾತನಾಡಿದರು.
ಶ್ರೀ ಡಾ.ಚನ್ನವೀರ ಶಿವಾಚಾರ್ಯ ಹಾರಕೂಡ, ಶ್ರೀ ರಾಜೇಶ್ವರ ಶಿವಾಚಾರ್ಯ ತಡೋಳಾ, ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಶ್ರೀ ಚಂದ್ರಗುಂಡ ಶಿವಾಚಾರ್ಯ, ಶ್ರೀ ರಾಚೋಟೇಶ್ವರ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಸಂಸದ ಡಾ.ಉಮೇಶ ಜಾಧವ್, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಸುಭಾಷ ಕಲ್ಲೂರ, ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ ಪಾಟೀಲ್ ತೆಲ್ಕೂರ, ಪ್ರಮುಖರಾದ ಸೋಮನಾಥ ಪಾಟೀಲ್, ಗುರುನಾಥ ಕೊಳ್ಳುರ್, ಬಸವರಾಜ ಆರ್ಯ, ಡಾ.ಮಹೇಶ ಪಾಟೀಲ್, ಪ್ರದೀಪ ವಾತಡೆ, ಸುನೀಲ ಪಾಟೀಲ್, ಸುರೇಶ ಸ್ವಾಮಿ ಇತರರಿದ್ದರು.
ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಶೀಲವಂತ ಸ್ವಾಗತಿಸಿದರು. ಶಾಂತಾ ಆನಂದ ಹಾಗೂ ರಮೇಶ ರಾಜೋಳೆ ನಿರೂಪಣೆ ಮಾಡಿದರು.
ಗೌರವ ಗುರುರಕ್ಷೆ: ಶ್ರೀ ಚನ್ನಮಲ್ಲ ಶಿವಾಚಾರ್ಯ ಬಡದಾಳ, ಶ್ರೀ ಶಿವಲಿಂಗ ಶಿವಾಚಾರ್ಯ ಮುಧೋಳ, ಶ್ರೀ ಶಿವಾನಂದ ಸ್ವಾಮೀಜಿ ಸಾಯಗಾಂವ, ಶ್ರೀ ಚನ್ನಬಸವ ಗುರು ಮಹಾಲಿಂಗ ಶಿವಾಚಾರ್ಯ ಬರದಾಪುರ, ಶ್ರೀ ಕಲ್ಲಯ್ಯ ಅಜ್ಜ ಗದಗ ಹಾಗೂ ಪೂಜ್ಯ ನಂದಿಕೇಶ್ವರಿ ಅಮ್ಮ ಲಿಂಗಸುಗೂರು ಅವರಿಗೆ ಗೌರವ ಗುರುರಕ್ಷೆ ನೀಡಿ ಶ್ರೀ ರಂಭಾಪುರಿ ಜಗದ್ಗುರು ಆಶೀರ್ವದಿಸಿದರು.
ಪ್ರಶಸ್ತಿ: ಪಡಸಾವಳಿ ಹಿರೇಮಠ ಮತ್ತು ಉದಗೀರ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರಿಗೆ ವೀರಶೈವ ತತ್ವ ಪ್ರಬೋಧಕ ಪ್ರಶಸ್ತಿ ಪ್ರದಾನ ಮಾಡಿ ಜಗದ್ಗುರುಗಳು ಶುಭ ಹಾರೈಸಿದರು.
ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ: ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗಲಾರದು. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಪೂಜ್ಯರು, ಭೌತಿಕ ಜೀವನದ ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ದೊಡ್ಡದು. ಮನುಷ್ಯ ಭೂತ ಮತ್ತು ಭವಿಷ್ಯದ ಬಗ್ಗೆ ಯೋಚಿಸುತ್ತಾನೆ. ಆದರೆ ವರ್ತಮಾನದ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಭೂಮಿಯ ವ್ಯಾಸ ಇದ್ದಷ್ಟೇ ಇದೆ. ಆದರೆ ಮನುಷ್ಯನ ಹವ್ಯಾಸಗಳು ಮಾತ್ರ ಬೆಳೆಯುತ್ತಲೇ ಇವೆ. ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧ ಸಡಿಲಗೊಳ್ಳಬಾರದು. ಶೀಲ, ಶೌರ್ಯ, ಚಟುವಟಿಕೆ, ಪಾಂಡಿತ್ಯ ಮತ್ತು ಸಂಗ್ರಹ ಈ ಐದು ಆಸ್ತಿಗಳು ಕಳ್ಳರು ಕದಿಯಲಾರದ ಅಕ್ಷಯ ನಿಧಿಗಳಿದ್ದಂತೆ. ಬೆಳೆದುನಿಂತ ಮರ, ಹರಿಯುವ ನೀರು, ಬೀಸುವ ಗಾಳಿ, ನಿಂತ ನೆಲ ತ್ಯಾಗದ ಹಿರಿಮೆ ಮತ್ತು ಪರೋಪಕಾರವನ್ನು ಎತ್ತಿ ತೋರಿಸುತ್ತದೆ. ಕೈಲಾಸಕ್ಕಿಂತ ಕಾಯಕ, ಧರ್ಮಕ್ಕಿಂತ ದಯಾಗುಣ ದೊಡ್ಡದು. ಅರಿವಿಗಿಂತ ಆಚಾರ ಮತ್ತು ಅಧಿಕಾರಕ್ಕಿಂತ ಅಭಿಮಾನ ದೊಡ್ಡದು ಎಂದು ಹೇಳಿದರು. ಮಾನ ಮತ್ತು ಸನ್ಮಾನಕ್ಕಿಂತ ಸಂಸ್ಕಾರ, ಸಂಸ್ಕೃತಿ ಮುಖ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಸ್ಪಷ್ಟವಾಗಿ ಬೋಧಿಸಿದ್ದಾರೆ. ಗುರಿಯೆಡೆಗೆ ಸಾಗುವಾಗ ಸಾವಿರಾರು ಸಂಕಷ್ಟ ಬರುವುದು ಸಹಜ. ಅವುಗಳಿಗೆ ಅಂಜದೆ ಅಳುಕದೆ ಗಟ್ಟಿ ಹೆಜ್ಜೆಯನ್ನಿಟ್ಟು ಮುನ್ನಡೆದರೆ ಜೀವನ ಉಜ್ವಲಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು.
ಪ್ರತಿಷ್ಠೆ ಬದಿಗೊತ್ತಿ ಒಂದಾಗಲಿ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಕ್ರಾಂತಿಗೆ ಗೌರವ ಬರಬೇಕೆಂದರೆ ನಮ್ಮ ಪ್ರತಿಷ್ಠೆಗಳನ್ನು ಬದಿಗೊತ್ತಿ ಒಂದಾಗಬೇಕು ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಎಲ್ಲರೂ ಒಗ್ಗಟ್ಟಾಗದಿದ್ದರೆ ಮುಂದಿನ ಜನಾಂಗ ನಮ್ಮನ್ನು ಕ್ಷಮಿಸುವುದಿಲ್ಲ. ಈ ಜಾಗೃತಿ ಪ್ರಸ್ತುತದ ನವರಾತ್ರಿಯಲ್ಲಿ ಆಗಬೇಕು ಎಂದರು. ಕಲ್ಯಾಣ ಬಸವಣ್ಣನ ಕರ್ಮಭೂಮಿ. ಸಮಾಜದಲ್ಲಿರುವ ಕಂದಾಚಾರ, ಅಸಮಾನತೆ ತೆಗೆದು ಹಾಕಬೇಕೆಂದು ಹೊರಾಡಿದ ಭೂಮಿ ಇದು. ಬಸವಣ್ಣ ಇಂದಿಗೂ ಪ್ರಸ್ತುತ. ಆದರೆ ಇದು ಖುಷಿಪಡುವ ವಿಷಯವಿಲ್ಲ. ಯಾಕೆಂದರೆ ಬಸವಣ್ಣನ ಕಾಲದಲ್ಲಿದ್ದ ಕಂದಾಚಾರ, ಅಸಮಾನತೆ ಇವತ್ತೂ ಇದೆ ಅಂದರೆ ವಿಚಾರ ಮಾಡಬೇಕು. ವಿಜ್ಞಾನ ಮತ್ತು ಅಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು. ರೈತರು, ದುಡಿಯುವವರಿಂದ ಸಮಾಜಕ್ಕೆ ತೊಂದರೆಯಾಗಿಲ್ಲ. ದುಡಿಮೆ ಮಾಡದವರಿಂದಲೇ ಸಮಾಜಕ್ಕೆ ಕಷ್ಟ ಎದುರಾಗಲಿದೆ. ಅಧಿಕಾರ, ಆಸ್ತಿಗಾಗಿ ಎಷ್ಟು ದಿನ ಸಮಾಜ ಒಡೆಯುತ್ತೀರಿ? ಮುಂದಿನ ಪೀಳಿಗೆ ಏನು ಮಾಡಬೇಕು? ಜಪಾನಿಗೆ ಹೋದವ ನಾನು ಜಪಾನಿನವ ಎನ್ನುತ್ತಾನೆ. ನಾವು ಯಾರೆಂದು ಹೇಳಬೇಕು? ಭಾರತೀಯರು ಎಂದು ಹೇಳಬೇಕಾ? ವೀರಶೈವ ಅನ್ನಬೇಕಾ ಅಥವಾ ಲಿಂಗಾಯತ ಹೇಳಬೇಕಾ ಎಂದು ಪ್ರಶ್ನಿಸಿದರು. ಬಸವಣ್ಣ ಮಾಡಿದ ಕ್ರಾಂತಿಗೆ ಗೌರವ ಬರಬೇಕೆಂದರೆ ನಮ್ಮ ಪ್ರತಿಷ್ಠೆಗಳನ್ನು ಬದಿಗೊತ್ತಿ ಒಂದಾಗಲೇಬೇಕು ಎಂದು ಕರೆ ನೀಡಿದರು.
ಬಸವಕಲ್ಯಾಣಕ್ಕೆ ರೈಲ್ವೆ ಸಂಪರ್ಕ: ಬಸವಾದಿ ಶರಣರ ಪುಣ್ಯ ಭೂಮಿಯಾದ ಬಸವಕಲ್ಯಾಣಕ್ಕೆ ಹುಮನಾಬಾದ್‌ನಿಂದ ರೈಲು ಸಂಪರ್ಕ ಕಲ್ಪಿಸಬೇಕೆಂಬುದು ಸ್ಥಳೀಯರ ಬೇಡಿಕೆಯಾಗಿದೆ. ಮನವಿಪತ್ರ ಸಲ್ಲಿಸಿದಲ್ಲಿ ತಕ್ಷಣ ಸರ್ವೇಗಾಗಿ ತಂಡ ಕಳಿಸಿ ಡಿಪಿಆರ್ ಸಿದ್ಧಪಡಿಸುವ ಜತೆಗೆ ರೈಲ್ವೆ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಭಾರಿ ಮಳೆಯಿಂದಾಗಿ ಹೊಲಗಳು ಹೋಗಿ ಕೆರೆಗಳಾಗಿದ್ದು, ಬೆಳೆಗಳನ್ನು ಕಳೆದುಕೊಂಡ ಅನ್ನದಾತರ ಬದುಕು ದಿಕ್ಕು ತೋಚದಂತಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಅನ್ನದಾತರ ನೆರವಿಗೆ ಬರಬೇಕಿದೆ. ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು.
| ಶರಣು ಸಲಗರ ಶಾಸಕ