ಜಿಲ್ಲೆ

ವೀರಶೈವ ಲಿಂಗಾಯತ ಸಮುದಾಯದ ಗಣತಿಗೆ ಸಿದ್ಧ

ಚಿತ್ರದುರ್ಗ: ತಾಂತ್ರಿಕವಾಗಿ ಸರಿಯಾಗಿರದ ಕಾಂತರಾಜ್ ಆಯೋಗದ ಜಾತಿಗಣತಿ ವರದಿಗೆ ನಮ್ಮ ತಕರಾರಿದೆ. ಸರ್ಕಾರ ಅನುಮತಿ ನೀಡಿದರೆ 18ತಿಂಗಳೊಳಗೆ ರಾಜ್ಯದಲ್ಲಿರುವ ವೀರಶೈವ-ಲಿಂಗಾಯಿತರ ಜಾತಿ ಜನಗಣತಿ ನಡೆಸಿ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅಖಿಲಭಾರತ ವೀರಶೈವ-ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಕೆ.ಬಿ. ಶ್ರೀನಿವಾಸ್‌ರೆಡ್ಡಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಒಂದೂವರೆ ಕೋಟಿಗೂ ಅಧಿಕ ವೀರಶೈವ-ಲಿಂಗಾಯತ ಜನಸಂಖ್ಯೆ ಇದೆ. ಕೆಲವೆಡೆ ಜಾತಿಗಣತಿ ಸರಿಯಾಗಿ ನಡೆದಿಲ್ಲ. ಈ ಕುರಿತು ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಚಿವ ಈಶ್ವರಖಂಡ್ರೆ ಸರ್ಕಾರದ ಗಮನ ಸೆಳೆಯಲಿದ್ದಾರೆ. ಮನೆ, ಮನೆಗೆ ಭೇಟಿ ನೀಡದೆ ಸಿದ್ಧಪಡಿಸಿರುವ ವರದಿಗೆ ಮಹಾ ಸಭಾದ ಒಪ್ಪಿಗೆ ಇಲ್ಲ. ನಾವೇ ರಾಜ್ಯದಾದ್ಯಂತ ಸಮುದಾಯದ ಗಣತಿ ನಡೆಸಿ ಸರ್ಕಾರಕ್ಕೆ ನಿಖರ ಮಾಹಿತಿ ಒದಗಿಸುತ್ತೇವೆ. ಜಾತಿ ಗಣತಿ ವರದಿಗೆ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದರು.

ಮಹಾಸಭಾದಿಂದ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ನಡೆಯಲಿದೆ. ಪ್ರತಿ ತಾಲೂಕಿನಲ್ಲೂ ಕನಿಷ್ಠ 10 ಸಾವಿರ ಸದಸ್ಯರ ಗುರಿ ಇದೆ. ವೀರಶೈವ ಮತ್ತು ಲಿಂಗಾಯತರು ಒಂದೇ ಎಂಬುದು ನಮ್ಮ ಭಾವನೆ. ಜಿಲ್ಲಾ ಮಟ್ಟದಲ್ಲಿ ಮಹಾಸಭಾದ ಯುವ ಮತ್ತು ಮಹಿಳಾ ಘಟಕಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

ಪ್ರತಿ ಜಿಲ್ಲಾ ಕೇಂದ್ರದಲ್ಲೂ ಸಮುದಾಯ ಭವನ, ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಲಿಂಗಾಯತ ಸಮುದಾಯದ ಕೆಲ ಉಪ ಪಂಗಡಗಳು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿವೆ. ಆ ಪಟ್ಟಿಗೆ ಉಳಿದೆಲ್ಲ ಉಪಪಂಗಡಗಳನ್ನು ಸೇರಿಸಬೇಕೆಂದು ಒತ್ತಾಯಿಸಿ ಹೋರಾಟ ಮಾಡಲಾಗುವುದು. ಈ ಬಗ್ಗೆ ರಾಜ್ಯ ಸರ್ಕಾರವೂ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದರು.

ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಮಾತನಾಡಿ, ಮಹಾಸಭಾದಿಂದ ಪ್ರತಿ ಜಿಲ್ಲೆಯಲ್ಲೂ ಹಾನಗಲ್ ಶ್ರೀ ಕುಮಾರ ಸ್ವಾ ಮೀಜಿ ಅವರ ಸಭಾಭವನ ನಿರ್ಮಿಸುವ ಉದ್ದೇಶವಿದೆ ಎಂದರು.

ರುದ್ರೇಶ್‌ಐಗಳ್, ಕೆ.ಬಿ.ಬಸವರಾಜಯ್ಯ, ನಾಗೇಶ್, ಶಶಿಧರ್‌ಬಾಬು, ರುದ್ರಪ್ಪ ಜಾಲಿಕಟ್ಟೆ ಇತರರು ಇದ್ದರು.