ಕಲಬುರಗಿ: ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕೆಂದು ಮಾಜಿ ಸಚಿವ ಮತ್ತು ಅಖಲಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಈಶ್ವರ ಖಂಡ್ರೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಗರದ ಧರಿಯಾಪುರ ಕೋಟನೂರ ಬಡಾವಣೆಯಲ್ಲಿ ವೀರಶೈವ ಮಹಿಳಾ ವಸತಿ ನಿಲಯದ ಭೂಮಿ ಪೂಜೆ ನೆರವೇರಿಸಿದ ಅವರು, ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೇಲ್ವರ್ಗದವರಿಗೆ ಶೇ.10 ಮೀಸಲಾತಿ ನಮ್ಮ ಸಮಾಜಕ್ಕೂ ಸಿಗುವಂತಾಗಬೇಕು ಎಂಬ ಬೇಡಿಕೆ ಪ್ರಸ್ತಾಪಿಸಿದರು.
ಮುಂದಿನ ವರ್ಷ ಶ್ರಾವಣ ಮಾಸದಲ್ಲಿ ಭವ್ಯ ಕಟ್ಟಡ ಉದ್ಘಾಟನಾ ಸಮಾರಂಭ ನೆರವೇರಿಸಲಾಗುವುದು. ಶಾಮನೂರ ಶಿವಶಂಕ್ರಪ್ಪ ನವರು ಹಾಸ್ಟೆಲ್ ನಿರ್ಮಾಣಕ್ಕೆ 50 ಲಕ್ಷ ರೂ. ನೀಡುವುದಾಗಿ ವಾಗ್ದಾನ ಮಾಡಿ ಹತ್ತು ಲಕ್ಷ ರೂ. ನೀಡಿದ್ದಾರೆ. ಅಲ್ಲದೇ ಸಮಾಜದ ಎಲ್ಲ ಶಾಸಕರು, ಮಾಜಿ ಶಾಸಕರು, ಗಣ್ಯರು ತಲಾ ಐದು ಲಕ್ಷ ರೂ. ದೇಣಿಗೆ ನೀಡಿ ಸಹಕರಿಸಿದ್ದಾರೆ. ತಾವೂ ಸಹ ಹತ್ತು ಲಕ್ಷ ರೂ ನೀಡುವುದಾಗಿ ವಾಗ್ದಾನ ಮಾಡಿದರು.
ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆಕೆಆರ್ಡಿಬಿ ಅಧ್ಯಕ್ಷರೂ ಆದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ರನ್ನು ಸಮಾಜದ ಪರವಾಗಿ ಮುಗುಳನಾಗಾಂವ್ ಶ್ರೀಗಳು ಸತ್ಕರಿಸಿ ಆಶೀರ್ವದಿಸಿದರು. ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಪ್ರಾಸ್ತಾವಿಕ ಮಾತನಾಡಿದರು.
ಶಾಸಕರಾದ ಬಿ.ಜಿ.ಪಾಟೀಲ್, ಎಂ.ವೈ.ಪಾಟೀಲ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಶಶಿಲ್ ನಮೋಶಿ, ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಹೈ-ಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಮುಖಂಡರಾದ ಸುರೇಶ ಸಜ್ಜನ, ರಾಜಶೇಖರ ಸಿರಿ, ಬಸವರಾಜ ಖಂಡೇರಾವ, ಶ್ರೀಮತಿ ಡಿ.ವಿ.ಪಾಟೀಲ್, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಮಹಾಸಭಾ ಉಪಾಧ್ಯಕ್ಷರಾದ ಈರಣ್ಣ ಗುಳೇದ, ಡಾ. ಸುಧಾ ಹಾಲಕಾಯಿ, ಗೌರಿ ಚಿಚಕೋಟಿ, ಸೋಮಶೇಖರ ಗೋನಾಯಕ, ಡಾ.ಶರಣಗೌಡ ಪಾಟೀಲ್, ಅಣ್ಣಾರಾವ ಪಾಟೀಲ್, ನಾಗಲಿಂಗಯ್ಯ ಮಠಪತಿ, ಉದಯಕುಮಾರ ಜೇವರ್ಗಿ , ಶರಣು ಸರಡಗಿ ಮೊದಲಾದವರು ಉಪಸ್ಥಿತರಿದ್ದರು. ಮಹಾಸಭಾ ಜಿಲ್ಲಾ ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್.ಪಾಟೀಲ್ ನರಬೋಳಿ ನಿರೂಪಣೆ ಮಾಡಿದರು.
ಮುಗಳನಾಗಾಂವ ಶ್ರೀಗಳಿಂದ ಲಕ್ಷ ರೂ.ದೇಣಿಗೆ
ಸಾನ್ನಿಧ್ಯ ವಹಿಸಿದ್ದ ಮುಗುಳನಾಗಾಂವ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿ ವಸತಿ ನಿಲಯ ನಿಮರ್ಾಣಕ್ಕೆ ಮಠದಿಂದ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಹೇಳಿದರು.