ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸಿದ ಕೀರ್ತಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ. ಆದರೆ, ಇಂದು ವೀರಶೈವ ಲಿಂಗಾಯತ ಸಮಾಜದ ಹೆಸರಲ್ಲಿ ಒಳಪಂಗಡ ಕಟ್ಟಿಕೊಂಡು ಕೆಲವರು ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ ನಡೆಸುತ್ತಿರುವ ಖಂಡನೀಯ ಎಂದು ಮೂರುಸಾವಿರಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ನಗರದ ಮೂರು ಸಾವಿರಮಠದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ‘ವಿರಾಟಪುರ ವಿರಾಗಿ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಮಠಗಳ ಪರಂಪರೆ ಮುಂದುವರಿಸಿಕೊಂಡು ಹೋಗುವಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ. ಅನೇಕ ಮಠಗಳಿಗೆ ಸ್ವಾಮೀಜಿಗಳನ್ನು ನೀಡಿ, ವೀರಶೈವ ಸಮಾಜ ಒಂದುಗೂಡಿಸಲು ಅವರು ಸಂಸ್ಥೆ ಕಟ್ಟಿದ್ದರು. ಅದಕ್ಕೆ ಅನೇಕರನ್ನು ಅಧ್ಯಕ್ಷರನ್ನಾಗಿ ಮಾಡಿ, ತಾವು ದೂರದಿಂದಲೇ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಮಾದರಿಯಾದರು ಎಂದರು.
ಕುಮಾರ ಶಿವಯೋಗಿಗಳ ಕುರಿತು ಸಾಕಷ್ಟು ನಾಟಕ, ಪುರಾಣಗಳಿವೆ. ಆದರೆ, ಚಲನಚಿತ್ರವಾಗಿರಲಿಲ್ಲ. ಇದೀಗ ಮೌನತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಚಿತ್ರ ನಿರ್ವಣವಾಗಿರುವುದು ಹೆಮ್ಮೆಯ ಸಂಗತಿ. ಇಂದಿನ ಯುವ ಪೀಳಿಗೆಗೆ ಕುಮಾರ ಶಿವಯೋಗಿಗಳ ಜೀವನ ಚರಿತ್ರೆಯನ್ನು ಮುಟ್ಟಿಸುವ ಪ್ರಯತ್ನಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಧಾರವಾಡ ಶಾಸಕ ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರಶೈವ ಲಿಂಗಾಯತ ಒಳಪಂಗಡಗಳನ್ನು ಒಗ್ಗೂಡಿಸುವ ಮೂಲಕ ಮಾದರಿ ಸಮಾಜವನ್ನು ನಿರ್ವಿುಸುವಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪಾತ್ರ ಹಿರಿದು. ಪ್ರಸ್ತುತ ದಿನಗಳಲ್ಲಿ ನಾವು ಧರ್ಮ, ಸಂಸ್ಕಾರ ಮರೆಯುತ್ತಿದ್ದೇವೆ. ಬದುಕಿಗೆ ಅವು ಎಷ್ಟು ಮುಖ್ಯ ಎನ್ನುವುದನ್ನು ತಿಳಿಯಲು ಕುಮಾರ ಶಿವಯೋಗಿಗಳ ಬದುಕಿನ ಯಶೋಗಾಥೆ ಅರಿಯಬೇಕು. ಚಲನಚಿತ್ರದ ಮೂಲಕ ಅದು ನೋಡುವ ಭಾಗ್ಯ ನಮ್ಮದಾಗುತ್ತಿದ್ದು, ಅದರ ಯಶಸ್ಸಿಗೆ ನಾವೆಲ್ಲ ಶ್ರಮಿಸೋಣ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ನಿವೃತ್ತ ಆರ್ಟಿಒ ಅಪ್ಪಯ್ಯ ನಾಲತ್ವಾಡಮಠ ಮಾತನಾಡಿದರು
ಶಾಂತಲಿಂಗೇಶ್ವರ ವಿರಕ್ತಮಠದ ಶ್ರೀ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ, ಹುಕ್ಕೇರಿಯ ಶ್ರೀ ಸದಾಶಿವ ಸ್ವಾಮೀಜಿ, ಪಂಚಮಠ ಸಂಸ್ಥಾನದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರೇಶ ಸಂಗಳದ, ಕೇದಾರ ಸ್ವಾಮಿ, ಸುರೇಶ ಪರಂಡಿ ಇತರರು ಇದ್ದರು.
ಹಾನಗಲ್ಲ ಕುಮಾರ ಶಿವಯೋಗಿಗಳ ಚರಿತ್ರೆ ಸರಿಯಾಗಿ ದಾಖಲಾಗಿಲ್ಲ ಎನ್ನುವುದು ಕಳವಳಕಾರಿ. ದಾಖಲಾದ ಕೆಲವಷ್ಟು ಚರಿತ್ರೆಯನ್ನಾದರೂ ನಾವು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನದ ಫಲವಾಗಿ ವಿರಾಟಪುರ ವಿರಾಗಿ ಎಂಬ ಚಿತ್ರ ನಿರ್ವಣವಾಗಿದೆ. ಇದು ಇಂದಿನ ಯುವ ಸಮುದಾಯ ಹಾಗೂ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿದೆ.
-ಸುಚೇಂದ್ರ ಪ್ರಸಾದ, ಚಿತ್ರದ ನಟ
ಜ. 13ರಂದು ಹಾನಗಲ್ಲ ಕುಮಾರ ಶಿವಯೋಗಿಗಳ ವಿರಾಟಪುರ ವಿರಾಗಿ ಚಿತ್ರವು ರಾಜ್ಯದಾದ್ಯಂತ ತೆರೆಕಾಣಲಿದೆ. ಇದಕ್ಕೆ ಪೂರಕವಾಗಿ ರಾಜ್ಯದ ಆರು ಕಡೆ ಹಾನಗಲ್ಲ ಕುಮಾರಸ್ವಾಮಿಗಳ ಯಶೋಗಾಥೆ ಬಿಂಬಿಸುವ ರಥಯಾತ್ರೆ ನಡೆಯುತ್ತಿದೆ.
-ಬಿ.ಎಸ್. ಲಿಂಗದೇವರು, ಚಿತ್ರ ನಿರ್ದೇಶಕ