ಜಿಲ್ಲೆ

ವೀರಶೈವ-ಲಿಂಗಾಯತ ಅಧ್ಯಯನ ಪೀಠ ಸ್ಥಾಪಿಸಿ

ಬೀದರ್: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವೀರಶೈವ ಲಿಂಗಾಯತ ಅಧ್ಯಯನ ಪೀಠ ಸ್ಥಾಪಿಸಿ, ಅದಕ್ಕೆ ರು.10 ಕೋಟಿ ಅನುದಾನ ಕಲ್ಪಿಸಲು ಹಿರೇಮಠ ಸಂಸ್ಥಾನ ಬೇಮಳಖೇಡ್-ಗೋರ್ಟಾದ ಶ್ರೀ ಡಾ. ರಾಜಶೇಖರ ಶಿವಾಚಾರ್ಯರು ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದ ಶ್ರೀಗಳು, ಜಾಗತಿಕ ಧರ್ಮ-ದರ್ಶನಗಳಲ್ಲಿ ವಿಶಿಷ್ಟ ಸ್ಥಾನಮಾನ ಹೊಂದಿರುವ ವೀರಶೈವ-ಲಿಂಗಾಯತ ಧರ್ಮವು ಪ್ರಪಂಚದ ಅತ್ಯಂತ ಪುರಾತನ ಮತ್ತು ಸನಾತನ ಧರ್ಮವಾಗಿದೆ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಂದ ಸಂಸ್ಥಾಪಿಸಲ್ಪಟ್ಟ ಮತ್ತು ಬಸವಾದಿ ಶಿವಶರಣರಿಂದ ಉದ್ಧರಿಸಲ್ಪಟ್ಟ ಈ ಧರ್ಮವು ಎಲ್ಲರ ಒಳಿತು ಬಯಸುತ್ತದೆ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಇದರ ಧ್ಯೇಯ. ಈ ಬಗ್ಗೆ ಸಾಕಷ್ಟು ಅಧ್ಯಯನ ಅಗತ್ಯವಾಗಿದೆ ಎಂದು ಗಮನ ಸೆಳೆದಿದ್ದಾರೆ.

ಉದಾತ್ತ ಮೌಲಿಕ ಜೀವನ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಸುವುದು ವರ್ತಮಾನದ ಜರೂರಿಯಾಗಿದೆ. ಸರ್ಕಾರ ಇದಕ್ಕೆ ವ್ಯವಸ್ಥೆ ಮಾಡುವುದು ಅಗತ್ಯ. ಇದು ಸಮಾಜದ ಬಹುದಿನದ ಬೇಡಿಕೆಯಾಗಿದೆ. ತಾವು ಈ ಕುರಿತು ಆಸಕ್ತಿ ವಹಿಸಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವೀರಶೈವ ಲಿಂಗಾಯತ ಅಧ್ಯಯನ ಪೀಠ ಸ್ಥಾಪಿಸಿ ಅದಕ್ಕೆ 10 ಕೋಟಿ ರೂ.ಅನುದಾನ ಒದಗಿಸಿ ಸಮಾಜದ ಬಹುದಿನದ ಬೇಡಿಕೆ ಈಡೇರಿಸಬೇಕು ಎಂದು ಕೋರಿದ್ದಾರೆ.