ವಿಜಯವಾಣಿ ಸುದ್ದಿಜಾಲ ಧಾರವಾಡ
ವೀರಶೈವ ಲಿಂಗಾಯತ ಸಮಾಜ ಒಳ ಪಂಗಡಗಳನ್ನು ಮರೆತು ಒಂದಾಗಿ ಕೆಲಸ ಮಾಡಬೇಕು. ಇದರಿಂದ ಇಡೀ ರಾಜ್ಯಕ್ಕೆ ಸಾಮರಸ್ಯದ ಬದುಕು ಕಟ್ಟಿಕೊಡಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನಗರದ ಮಗದುಮ್ ಕಲ್ಯಾಣ ಮಂಟಪದಲ್ಲಿ ಭಾರತಿನಗರದ ಶ್ರೀ ಲಿಂಗರಾಜ ವಿವಿಧೋದ್ದೇಶ ಸಂಸ್ಥೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯಿ ಅವರ 162ನೇ ರಾಜ್ಯಮಟ್ಟದ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ನಾಡು, ದೇಶ ಅಭಿವೃದ್ಧಿಯಾಗಲು, ಶಾಶ್ವತ ಭವಿಷ್ಯ ಕಟ್ಟಲು ಶ್ರೀಮಂತ ಇತಿಹಾಸಬೇಕು. ಇಂತಹ ಇತಿಹಾಸ ವಿದೇಶಗಳಿಂದ ಸಿಗುವುದಿಲ್ಲ. ನಮ್ಮಲ್ಲೇ ಹುಟ್ಟಿ ಬೆಳೆದು ಆದರ್ಶವಾಗಿ ಬದುಕು ನಡೆಸಿದ ವ್ಯಕ್ತಿಗಳಿಂದ ನಾಡು ಶ್ರೀಮಂತವಾಗಿ ಭವಿಷ್ಯ ಸಿಗಲಿದೆ. ಇಂತಹದ್ದರಲ್ಲಿ ಲಿಂಗರಾಜ ದೇಸಾಯಿ ಮೇಲ್ಪಂಕ್ತಿಯಲ್ಲಿದ್ದಾರೆ ಎಂದರು.
18ನೇ ಶತಮಾನದಲ್ಲಿ ಪರಕೀಯರಿಂದ ಬೇಸತ್ತ ಭಾರತೀಯರು ಹೋರಾಟ ನಡೆಸಿದರು. ಬರೀ ಸ್ವಾತಂತ್ರೃಅಲ್ಲ. ಎಲ್ಲ ಸ್ತರದಲ್ಲೂ ಬದಲಾವಣೆ ತಂದ ಮಹಾನ್ ಕ್ರಾಂತಿ. ವೈಚಾರಿಕ, ಸಾಮಾಜಿಕ, ಶೈಕ್ಷಣಿಕ, ಅಧ್ಯಾತ್ಮಿಕವಾಗಿ ದೊಡ್ಡ ಬದಲಾವಣೆ ತಂದಿದೆ. ಇದರ ಮೂಲ ಬೇರು ನಮ್ಮ ಸಂಸ್ಕೃತಿ, ಸಂಸ್ಕಾರ. ಅಖಿಲ ಭಾರತ ವೀರಶೈವ ಮಹಾಸಭಾ ಆರಂಭಿಸುವ ಚಿಂತನೆ ಲಿಂಗರಾಜರಲ್ಲಿ ಮೂಡಿತ್ತು. ಇದರ ಪರಿಣಾಮ ಇಡೀ ಉತ್ತರ ಕರ್ನಾಟಕದಲ್ಲಿ ಶಿಕ್ಷಣ, ಸಾಮಾಜಿಕ ಬೆಳವಣಿಗೆ, ಸಾಮಾಜಿಕ ಸಾಮರಸ್ಯ ಮೂಡಲು ಕಾರಣವಾಯಿತು. ಮಹಾಸಭಾ ಸ್ಥಾಪಿಸದಿದ್ದರೆ ಕರ್ನಾಟಕದಲ್ಲಿ ಅಧ್ಯಾತ್ಮಿಕ, ಶೈಕ್ಷಣಿಕವಾಗಿ ಎಷ್ಟು ಹಿಂದುಳಿಯುತ್ತಿತ್ತು ಎಂಬುದನ್ನು ಅರಿಯಬೇಕು ಎಂದರು.
ಮಠಗಳು ಜಾತಿ ಬೇಧ ಎನ್ನದೆ ಎಲ್ಲ ಸಮಾಜದ ಮಕ್ಕಳಿಗೆ ಜ್ಞಾನ, ಅನ್ನ ದಾಸೋಹ ನೀಡಿ ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸಿವೆ. ಲಿಂಗರಾಜರ ಕರೆಯಿಂದ ಅನೇಕ ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳು ಆರಂಭವಾಗಿವೆ. ಲಿಂಗರಾಜರು ಒಬ್ಬ ವ್ಯಕ್ತಿಯಲ್ಲ. ಒಂದು ಸಂಸ್ಥೆಯಂತಿದ್ದರು. ಅವರ ಆದರ್ಶಗಳು ಸಮಾಜಕ್ಕೆ ಮಾದರಿ. ಆ ಆದರ್ಶಗಳನ್ನು ಮುಂದಿಟ್ಟುಕೊಂಡು ಮುನ್ನಡೆಯೋಣ ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಮಾತನಾಡಿ, ಸ್ವಾತಂತ್ರೃಕ್ಕೂ ಪೂರ್ವದಲ್ಲಿ ಅನೇಕ ಸಂಸ್ಥಾನಗಳು ಇದ್ದವು. ಅವುಗಳಲ್ಲಿ ಈವರೆಗೂ ಉಳಿದಿದ್ದು ಶಿರಸಂಗಿ ಸಂಸ್ಥಾನ ಮಾತ್ರ. ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಈ ಸಂಸ್ಥಾನ ಶ್ರಮಿಸಿರುವುದೇ ಇದಕ್ಕೆ ಕಾರಣ. ಲಿಂಗರಾಜರು ಸಮಸ್ತ ಲಿಂಗಾಯತ ಸಮಾಜಕ್ಕೆ ಶ್ರಮಿಸಿದ್ದು, ಅವರನ್ನು ಒಂದು ಉಪ ಪಂಗಡಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಶಿರಸಂಗಿ ಟ್ರಸ್ಟ್‌ಗೆ ಮುಖ್ಯಮಂತ್ರಿ ಸಹಾಯ ಮಾಡಲಿದ್ದಾರೆ. ಹೀಗಾಗಿ ಎಲ್ಲರೂ ಸೇರಿ ಮುನ್ನಡೆಸೋಣ ಎಂದರು.
ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ಕಲ್ಪಿಸಲು ಸಿಎಂ ಸಿದ್ಧರಾಗಿದ್ದಾರೆ. ಅದೇ ರೀತಿ ಕುಡವಕ್ಕಲಿಗರ ಸಮಾಜದ ಬೇಡಿಕೆಗಳನ್ನೂ ಈಡೇರಿಸುತ್ತಾರೆ. ಕುಡುವಕ್ಕಲಿಗ ಸಮಾಜ ನಾಡಿಗೆ ಮಾದರಿಯಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ತೋಂಟದ ಶ್ರೀ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಸ್ವಾತಂತ್ರೃ ಪೂರ್ವದಲ್ಲೇ ಸಿರಸಂಗಿ ಅವರು ತಮ್ಮ ಇಡೀ ಆಸ್ತಿ ದಾನ ಮಾಡಿ ತ್ಯಾಗ ವೀರರಾಗಿದ್ದಾರೆ. ಸಮಾಜಕ್ಕೆ ಸರ್ವಸ್ವವನ್ನೂ ಅರ್ಪಿಸಿ ಯಾವುದೋ ಒಂದು ಉಪ ಪಂಗಡಕ್ಕೆ ಅಂಟಿಕೊಳ್ಳದೇ ಇಡೀ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಲಿಂಗಾಯತ ಸಮಾಜದ ಏಕತೆಗೆ ಲಿಂಗರಾಜ ಜಯಂತಿ ಆಚರಣೆ ಮಾಡಬೇಕು. ಅವರ ಸ್ಮಾರಕ ನಿರ್ಮಿಸಬೇಕು ಎಂದರು.
ಮೂರು ಸಾವಿರ ಮಠದ ಡಾ. ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ವಿಧಾನಸೌಧ ಎದುರು ಲಿಂಗರಾಜರ ಸ್ಮಾರಕ ನಿರ್ಮಿಸಬೇಕು ಎಂದರು.
ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅಮೃತ ದೇಸಾಯಿ, ಸಂಸ್ಥೆ ಅಧ್ಯಕ್ಷ ಆರ್.ಆರ್. ಕುಡವಕ್ಕಲಿಗೇರ, ಗೌರವಾಧ್ಯಕ್ಷ ಎಸ್.ಜಿ. ಹುಬ್ಬಳ್ಳಿ, ಉಪಾಧ್ಯಕ್ಷ ವೈ.ಎಫ್. ಹುಲಗೂರ, ಕಾರ್ಯದರ್ಶಿ ಬಿ.ಎಚ್.ಪಾಟೀಲ, ಸಹ ಕಾರ್ಯದರ್ಶಿ ಡಿ.ಆರ್. ಅಣ್ಣಿಗೇರಿ, ಕೋಶಾಧ್ಯಕ್ಷ ಆರ್.ಪಿ. ಹುಲ್ಲೂರ, ಸದಸ್ಯರಾದ ಎಂ.ಎಸ್.ಬೆಟಗೇರಿ, ಎಂ.ಸಿ.ರೂಗಿ, ಎಂ.ಸಿ.ಹುಲ್ಲೂರ, ಜಿ.ಎಸ್. ಮರಲಿಂಗಣ್ಣವರ, ಎಸ್.ಬಿ.ಮರಲಿಂಗಣ್ಣವರ, ಇತರರು ಇದ್ದರು.