ಜಿಲ್ಲೆ

ವೀರಶೈವ ಮಹಾಸಭಾ ಮತದಾನ 25ರಂದು

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಆಯ್ಕೆಗೆ ಕಲಬುರಗಿ ಸೇರಿ ರಾಜ್ಯಾದ್ಯಂತ ಆ.೨೫ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ೧೯೩೩ ಜನರು ರಾಜ್ಯ ಘಟಕಕ್ಕೆ ಮತ ಹಕ್ಕು ಹೊಂದಿದ್ದಾರೆ ಎಂದು ಮಹಾಸಭೆ ಜಿಲ್ಲಾಧ್ಯಕ್ಷ ಶರಣು ಮೋದಿ ತಿಳಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆ.೨೫ರಂದು ಬೆಳಗ್ಗೆ ೮ರಿಂದ ಸಂಜೆ ೫ಗಂಟೆವರೆಗೆ ಮತದಾನ ನಡೆಯಲಿದೆ. ರಾಜ್ಯ ಕಾರ್ಯಕಾರಿಗೆ ೪೦ ಸ್ಥಾನಗಳಿದ್ದು, ೧೩ ಮಹಿಳಾ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆದಿದೆ. ೨೭ ಪುರುಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೨೭ ಸ್ಥಾನಕ್ಕೆ ೫೭ ಜನ ಕಣದಲ್ಲಿದ್ದಾರೆ. ಕಲಬುರಗಿ ಜಿಲ್ಲೆಯ ರಾಜಶೇಖರ ಸಿರಿ, ಶಶಿಕಾಂತ ಪಾಟೀಲ್, ಸಂತೋಷ ಪಾಟೀಲ್ ಸರಡಗಿ ಸಹ ಕಣದಲ್ಲಿದ್ದಾರೆ. ರಾಜ್ಯಾಧ್ಯಕ್ಷರಾಗಿ ಶಂಕರ ಬಿದರಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅವರ ಪೆನಾಲ್‌ನಲ್ಲೇ ಜಿಲ್ಲೆಯ ಮೂವರು ಕಣದಲ್ಲಿ ಇರಲಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿಯಾಗಿ ಶರಣಬಸಪ್ಪ ಕಾಡಾದಿ ಕಾರ್ಯನಿರ್ವಹಿಸಲಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿ ಘಟಕಕ್ಕೆ ಶರಣಬಸಪ್ಪ ದರ್ಶನಾಪುರ, ಚಂದು ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
೧೯೦೪ರಲ್ಲಿ ಹಾನಗಲ್ ಗುರುಕುಮಾರಸ್ವಾಮಿಗಳ ಸ್ಥಾಪಿಸಿದ ವೀರಶೈವ ಮಹಾಸಭೆಯಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಜಿಲ್ಲೆಯಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಮಹಿಳಾ ವಸತಿ ನಿಲಯ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಪ್ರಮುಖರಾದ ಶಶಿಕಾಂತ ಪಾಟೀಲ್, ಸೋಮಶೇಖರ ಹಿರೇಮಠ, ಡಾ.ಸುಧಾ ಹಾಲಕಾಯಿ, ಶರಣು ಪಪ್ಪಾ, ರಾಜಶೇಖರ ಸಿರಿ, ರವಿ ಕೋಳಕೂರ ಇತರರಿದ್ದರು.