ಜಿಲ್ಲೆ

ವೀರಶೈವ ಮಹಾಸಭಾ ಧರಣಿ 24ರಂದು

ಧಾರವಾಡ: ವೀರಶೈವ ಲಿಂಗಾಯತ ಸಮಾಜವನ್ನು ಹಿಂದುಳಿದ ವರ್ಗದ (ಒಬಿಸಿ) ಪಟ್ಟಿಗೆ ಸೇರಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಸೆ. 24ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಅಧ್ಯಕ್ಷ ಗುರುರಾಜ ಹುಣಸಿಮರದ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರ ಹೊರಡಿಸಿರುವ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಸೇರಿಸಿ, ಸಮುದಾಯದ ಯುವ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಅವಕಾಶ ಕಲ್ಪಿಸಬೇಕಿದೆ ಎಂದರು.

ಭಾರತ ಸರ್ಕಾರ ಸಂವಿಧಾನದ ಅನುಚ್ಛೇದ 15(4) ಮತ್ತು 16(4)ಅನ್ವಯ ಇತರ ಹಿಂದುಳಿದ ವರ್ಗಗಳ ಪಟ್ಟಿಯನ್ನು ಅಧಿಸೂಚಿಸಿದೆ. ಪಟ್ಟಿಯಲ್ಲಿರುವ ಸಮುದಾಯದವರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ನಾಗರಿಕ ಹುದ್ದೆಗಳಲ್ಲಿ ಮೀಸಲು ಕಲ್ಪಿಸುತ್ತದೆ. ಈ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಕೈಬಿಟ್ಟಿರುವುದು ಸಮುದಾಯದ ಬಡ ಜನರು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಿಂದ ವಂಚಿತವಾಗುವಂತಾಗಿದೆ ಎಂದರು.

ರಾಜ್ಯದಲ್ಲಿ 70 ವರ್ಷಗಳಿಂದಲೂ ವೀರಶೈವ ಲಿಂಗಾಯತ ಸಮುದಾಯವನ್ನು ಇತರ ಹಿಂದುಳಿದ ವರ್ಗಎಂದು ಪರಿಗಣಿಸಲಾಗಿದ್ದರೂ, ಕೇಂದ್ರ ಪಟ್ಟಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಈ ಸಮುದಾಯವನ್ನು ಕೈಬಿಟ್ಟಿರುವುದು ಅನ್ಯಾಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ಇದಲ್ಲದೆ ಸಮುದಾಯದ ಹಿತದೃಷ್ಟಿಯಿಂದ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ಆರಂಭಿಕ ಹಂತದಲ್ಲಿ 1 ಸಾವಿರ ಕೋಟಿ ರೂ. ಅನುದಾನ ಮೀಸಲಿಡಬೇಕು. ಈ ಅನುದಾನವು ಮಕ್ಕಳಿಗೆ ಸ್ಟೈಫಂಡ್ ನೀಡುವುದು ಸೇರಿ ಸಮುದಾಯದ ಅಭಿವೃದ್ಧಿಗೆ ಅನುಕೂಲವಾಗಲಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯ ಬೆಂಬಲ ನೀಡಿದೆ. ಹೀಗಾಗಿ ಮುಖ್ಯಮಂತ್ರಿಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆ ಈಡೇರಿಸಬೇಕು. ಸದನದಲ್ಲಿ ಸಮುದಾಯದ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಧರಣಿಯಲ್ಲಿ ಮಠಾಧೀಶರು, ಸಮಾಜದ ಎಲ್ಲ ಜನರು ಪಾಲ್ಗೊಂಡು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ, ಕೋಶಾಧ್ಯಕ್ಷ ಬಿ.ಎಸ್.ಗೋಲಪ್ಪನವರ, ಕಾರ್ಯದರ್ಶಿ ಸಿದ್ದಣ್ಣ ಕಂಬಾರ, ಶಹರ ಘಟಕದ ಅಧ್ಯಕ್ಷ ಎಂ.ಎಫ್. ಹಿರೇಮಠ, ಯುವ ಘಟಕದ ಜಿಲ್ಲಾಧ್ಯಕ್ಷ ಮೈಲಾರ ಉಪ್ಪಿನ, ಶ್ರೀಶೈಲಗೌಡ ಕಮತರ, ಇತರರು ಇದ್ದರು.</