ಜಿಲ್ಲೆ

ವೀರವನಿತೆಯರ ಹೋರಾಟ ಅಸಾಧಾರಣ

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದ ಸ್ವಾತಂತ್ರೃ ಹೋರಾಟದಲ್ಲಿ ಕನ್ನಡ ನಾಡಿನ ವೀರವನಿತೆಯರ ಕೆಚ್ಚೆದೆಯ ಹೋರಾಟ ಅಸಾಧಾರಣವಾದುದು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ನಗರದ ಕೆ.ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕರ್ನಾಟಕದಲ್ಲಿ ಸ್ವಾತಂತ್ರೃ ಹೋರಾಟದ ಆ ದಿನಗಳು ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕ ಪ್ರಕಾಶ ಸುಣಗಾರ ಮಾತನಾಡಿ, ಕರಾವಳಿ ಉಳ್ಳಾಲದ ರಾಣಿ ಅಬ್ಬಕ್ಕದೇವಿ 1556ರಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಮೊದಲ ಭಾರತೀಯ ರಾಣಿ. ಅವಳ ಶೌರ್ಯ, ಸಾಹಸದ ಹೋರಾಟ ಸ್ಮರಣೀಯ. ಬೆಳವಡಿ ಮಲ್ಲಮ್ಮ, ಕಿತ್ತೂರು ಚನ್ನಮ್ಮ, ಒನಕೆ ಓಬವ್ವ, ಕೆಳದಿ ಚನ್ನಮ್ಮ, ಇತರರು ಸ್ವಾತಂತ್ರೃಕ್ಕಾಗಿ ಹೋರಾಡಿದ ಕನ್ನಡದ ವೀರ ಮಹಿಳೆಯರು ಎಂದರು.
ಮಹಿಳಾ ಸ್ವಾತಂತ್ರೃ ಹೋರಾಟಗಾರ್ತಿಯರಾದ ಸಿದ್ದಮ್ಮ ಬಳ್ಳಾರಿ, ಉಮಾಬಾಯಿ ಕುಂದಾಪುರ, ಹುಬ್ಬಳ್ಳಿಯ ನಾಗಮ್ಮ ಪಾಟೀಲ, ಶಕುಂತಲಾ ಕುರ್ತಕೋಟಿ, ಯಶೋಧರಾ ದಾಸಪ್ಪ ಗಾಂಧೀಜಿ ಮಾರ್ಗದರ್ಶನದಲ್ಲಿ ಕ್ವಿಟ್ ಇಂಡಿಯಾ ಹಾಗೂ ಅಸಹಕಾರ ಚಳವಳಿಯಲ್ಲಿ ಸಂಘಟಿತರಾಗಿ ಆಳರಸರ ವಿರುದ್ಧ ಸ್ವಾಭಿಮಾನದ ಹೋರಾಟ ನಡೆಸಿದರು. ಈ ಹೋರಾಟಗಾರ್ತಿಯರ ಜೀವನದ ಯಶೋಗಾಥೆ ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿ ಎಂದರು.
ಕೆ.ಇ. ಬೋರ್ಡ್ ಸಂಸ್ಥೆ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ ಅಧ್ಯಕ್ಷತೆ ವಹಿಸಿದ್ದರು. ಎಸ್.ಎನ್. ಪರಾಂಡೆ, ವಸಂತ ಮುರ್ಡೇಶ್ವರ, ಎನ್.ಎಸ್. ಗೋವಿಂದರೆಡ್ಡಿ, ಪ್ರಾಚಾರ್ಯ ಸುನೀತಾ ಕಡಪಟ್ಟಿ, ಪ್ರೊ. ಹರ್ಷ ಡಂಬಳ, ಕೆ.ಜಿ. ದೇವರಮನಿ, ಮಹಾಂತೇಶ ನರೇಗಲ್, ಬಿ.ಬಿ. ಪಾಟೀಲ, ಎಸ್.ಡಿ. ಮರೇದ, ಎಸ್.ಎಚ್. ಚವ್ಹಾಣ, ಸಂತೋಷ ವಕ್ಕುಂದ, ಇತರರು ಇದ್ದರು.
ಎಸ್.ಜಿ. ಕಡಪಟ್ಟಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಲ್. ಶೇಖರಗೋಳ ನಿರೂಪಿಸಿದರು. ಗೋವಿಂದ ಕುಲಕರ್ಣಿ ವಂದಿಸಿದರು.