ಬಳ್ಳಾರಿ : ಸಾವು ಎನ್ನುವುದು ಎಲ್ಲರಿಗೂ ಬರುತ್ತದೆ. ಆದರೆ, ಕಾರ್ಗಿಲ್‌ನಲ್ಲಿ ವೀರಮರಣ ಹೊಂದಿದವರು ಶ್ರೇಷ್ಠರಾಗಿದ್ದಾರೆ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಹೇಳಿದರು.
ನಗರದ ಎಸ್ಪಿ ಕಚೇರಿ ಆವರಣದ ಮುಂಭಾಗದಲ್ಲಿನ ಅಮರ್ ಜವಾನ್ ಯುದ್ಧ ಸ್ಮಾರಕದಲ್ಲಿ ಜಿಲ್ಲಾ ಮಾಜಿ ಸೈನಿಕರ ಮತ್ತು ವೀರ ನಾರಿಯರ ಕಲ್ಯಾಣ ಸಮಿತಿ ವತಿಯಿಂದ ಶುಕ್ರವಾರ ನಡೆದ 25ನೇ ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಮಾತನಾಡಿದರು. ಪ್ರತಿಯೊಬ್ಬ ಸೈನಿಕರು ದೇಶಕ್ಕೆ ತಮ್ಮದೆ ಅದ ಕೊಡುಗೆ ನೀಡಿದ್ದಾರೆ. ಯುದ್ದ ಹೋರಾಡಿದ ಸೈನಿಕರ ಜತೆ ನಾವು ಇರುವುದು ಸಂತಸದ ವಿಷಯವಾಗಿದೆ ಎಂದರು.
ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾದ್ಯಕ್ಷ ಚೆನ್ನಾರೆಡ್ಡಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ 527 ಸೈನಿಕರ ಬಲಿದಾನವಾಯಿತು. ಮೇ 03 ರಂದು ಆರಂಭವಾದ ಯುದ್ಧ ಜು. 25 ರವರೆಗೆ ನಡೆಯಿತು. ಅನಿರೀಕ್ಷಿತವಾಗಿ ಬಂದ ಕಾರ್ಗಿಲ್ ಯುದ್ಧವನ್ನು ಭಾರತ ಸೈನ್ಯ ಹವಾಮಾನ ಹಾಗೂ ಶತ್ರಗಳನ್ನು ಸಮನಾಗಿ ಎದುರಿಸಿ ಯುದ್ಧ ಗೆಲ್ಲಬೇಕಾಯಿತು. ಯುದ್ಧ ಕೌಶಲ್ಯದ ಬಗ್ಗೆ ಇತರ ದೇಶಗಳು ನಮ್ಮಿಂದ ಅರಿತಕೊಂಡರು ಎಂದು ಹೆಮ್ಮೆಯಿಂದ ಹೇಳಿದರು.
ಗುರುವಾರ ಸಂಜೆ ಇಲ್ಲಿನ ಎಸ್ಪಿ ವೃತ್ತದಿಂದ ಅಮರ್ ಜವಾನ್ ಯುದ್ಧ ಸ್ಮಾರಕಕ್ಕೆ ಮಾಜಿ ಸೈನಿಕರು ಹಾಗೂ ವಿವಿಧ ಜನಪರ ಸಂಘಟನಕಾರರು ಮೇಣದ ಬತ್ತಿಯೊಂದಿಗೆ ಪಾದಯಾತ್ರೆ ನಡೆಸಿ ವೀರಮರಣ ಹೊಂದಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರಮುಖರಾದ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎ.ವಿ.ಕೆ. ಚೌದರಿ, , ಗೌರವಾಧ್ಯಕ್ಷ ವಿ.ಜೋಶಿ, ಕಾರ್ಯದರ್ಶಿ ವಿ.ಟಿ. ನಾಯ್ಡು, ಕೋಶಾಧಿಕಾರಿ ನಾಗರಾಜ, ರಾಜ್ಯ ರೈತ ಹಸಿರು ಸೇನೆ ಸಂಘದ ಅಧ್ಯಕ್ಷ ಆರ್.ಮಾಧವರೆಡ್ಡಿ, ನಾಗವೇಣಿ, ಪದ್ಮಾವತಿ ಇದ್ದರು.