ಸಕಲೇಶಪುರ: ತಾಲೂಕಿನ ಬೆಳಗೋಡು ಹೋಬಳಿ ವೀರಣ್ಣನಕೊಪ್ಪಲು ಗ್ರಾಮದ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಡಗರದಿಂದ ಬುಧವಾರ ಜರುಗಿತು.
ಬೆಳಗ್ಗೆ ವೀರಭದ್ರೇಶ್ವರ ಮೂಲ ವಿಗ್ರಹಕ್ಕೆ ಕ್ಷೀರಾಭಿಷೇಕ, ಎಳನೀರು ಅಭಿಷೇಕ, ರುದ್ರಾಭಿಷೇಕದೊಂದಿಗೆ ವಿವಿಧ ಪೂಜೆಗಳು ನಡೆದವು. ಬೆಳಗ್ಗೆ 6 ರಿಂದ 8 ಗಂಟೆವರೆಗೆ ಕೊಂಡೋತ್ಸವ ನಡೆಯಿತು. ನಂತರ ಬಿಲ್ವಾರ್ಚನೆ, ಹಣ್ಣು, ಕಾಯಿ ಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ ಹಗಲು ಜಾತ್ರೆ ನಡೆದು ಸಂಜೆ ವಿಶೇಷವಾಗಿ ಓಕುಳಿ ಹಾಗೂ ನೂರಾರು ಭಕ್ತರ ಸಮ್ಮುಖದಲ್ಲಿ ದೇವರ ಉತ್ಸವ ನಡೆಯಿತು. ಜಾತ್ರೆ ವೇಳೆ ಮರದ ಎತ್ತರಕ್ಕೆ ಕಾಯಿಯನ್ನು ಕಟ್ಟಿ ಕಲ್ಲಿನಿಂದ ಗುರಿ ಹೊಡೆಯುವ ಸ್ಪರ್ಧೆೆ ನಡೆಯಿತು. ಗ್ರಾಮದ ಆಕಾಶ್ ಗೆಲುವು ಸಾಧಿಸಿದರು. ಮೈಸೂರು ಗಣೇಶ್ ಬೀಡಿ ವರ್ಕ್ಸ್ ಮಾಲೀಕರಾದ ರಾಮನಾಥ್ ಶೆಣೈ, ವಸುಮತಿ ಶೆಣೈ ದಂಪತಿ ದೇವಸ್ಥಾನಕ್ಕೆ 50 ಸಾವಿರು ರೂ.ದೇಣಿಗೆ ನೀಡಿದರು. ದಂಪತಿಯನ್ನು ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ ಅಭಿನಂದಿಸಲಾಯಿತು.
ಮೂರು ದಿನಗಳಿಂದ ಜಾತ್ರೆ ಅಂಗವಾಗಿ ನಿತ್ಯ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ,ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಈ.ಕೆ.ಬಸವರಾಜು, ಕಾರ್ಯದರ್ಶಿ ಬಾಗೆ ಪರಮೇಶ್, ಖಜಾಂಚಿ ಅಣ್ಣೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಲ್.ಸೋಮಶೇಖರ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಿಜೆಪಿ ಮುಖಂಡರಾದ ದೊಡ್ಡದಿಣ್ಣೆ ಜಯಪ್ರಕಾಶ್, ಮಂಜುನಾಥ್, ಜಯಶಂಕರ್, ಲೋಕೇಶ್ ಕುಮಾರ್, ಶೇಷೆಗೌಡ ಉಪಸ್ಥಿತರಿದ್ದರು.