ಬೆಟ್ಟದಪುರ: ಬೆಟ್ಟದಪುರ ಸಮೀಪದ ಹರದೂರು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಾಲಯ ಸಮಿತಿ ಮತ್ತು ಭಕ್ತರ ಸಹಕಾರದೊಂದಿಗೆ ನಿರ್ಮಾಣವಾಗಿರುವ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಮ್ಮ ದೇವಿಯ ದೇವಾಲಯದ ಜೀರ್ಣೋದ್ಧಾರ ಮತ್ತು ಮರು ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಶುಕ್ರವಾರ ಭಕ್ತಾದಿಗಳ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.
ದೇವಸ್ಥಾನ ಪ್ರತಿಷ್ಠಾಪನ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿಯಿಂದ ಸುಪ್ರಭಾತ ಸೇವೆ, ವೇದಪಾರಾಯಣ, ದ್ವಾರ ತೋರಣ, ಸ್ಥಾಪಿತ ಕಳಸ ಆರಾಧನೆ ಸೇರಿದಂತೆ ವಿವಿಧ ಬಗೆಯ ಹೋಮ ಹವನಗಳು ನಡೆದವು.
ಶುಕ್ರವಾರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಗ್ರಾಮದ ಮಹಿಳೆಯರು ಕೆರೆಗೆ ತೆರಳಿ ಗಂಗೆಪೂಜೆ ಮಾಡಿದ ಬಳಿಕ ಕಳಸ ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ವೀರಗಾಸೆ ನೃತ್ಯ ನೋಡಿಗರ ಮನಸೂರೆಗೊಂಡಿತು. ಗ್ರಾಮದಲ್ಲಿ ಹಸಿರು ತಳಿರು ತೋರಣಗಳು ಹಾಗೂ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಯುವಕರು ಮೆರವಣಿಗೆಯಲ್ಲಿ ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿದರು.
ಬೆಟ್ಟದಪುರದ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಶಾಸಕ ಕೆ.ಮಹದೇವ್, ಮಾಜಿ ಶಾಸಕ ಕೆ.ವೆಂಕಟೇಶ್, ಪರಿಸರ ಹೋರಾಟಗಾರ ಕೌಲನಹಳ್ಳಿ ಸೋಮಶೇಖರ್, ಮುಖಂಡ ಗಗನ್ ಸೇರಿದಂತೆ ಜನಪ್ರತಿನಿಧಿಗಳು ದೇವರ ದರ್ಶನ ಪಡೆದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.