ಮಳವಳ್ಳಿ: ಪಟ್ಟಣದ ಮಂಟೇಸ್ವಾಮಿ ಮಠದ ಬೀದಿಯಲ್ಲಿರುವ ಭದ್ರಕಾಳಮ್ಮ ಹಾಗೂ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಪೂಜಾ ವಿಧಿ ವಿಧಾನಗಳು ನೆರವೇರುವುದರ ಜತೆಗೆ ದಿವ್ಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮುಂಜಾನೆಯಿಂದಲೇ ಅರ್ಚಕ ವರ್ಗ ದೇವಾಲಯದಲ್ಲಿ ಹೋಮ ಹವನ ನಡೆಸಿ ವೀರಭದ್ರಸ್ವಾಮಿ ಮೂರ್ತಿಗೆ ಪಂಚಾಮೃತ ಹಾಗೂ ಕ್ಷೀರಾಭಿಷೇಕ ನೆರವೇರಿಸಿದರು. ಬಳಿಕ ವಿವಿಧ ಹೂಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ಮಾಡಿದರು. ನೂರಾರು ಭಕ್ತರು ಸರದಿಯಲ್ಲಿ ನಿಂತು ಪೂಜೆ ಸಲ್ಲಿಸಿ ದರ್ಶನ ಪಡೆದರು.
ಮಧ್ಯಾಹ್ನ 12.10ರಿಂದ 12.40ರ ವೃಶ್ಚಿಕ ಲಗ್ನದಲ್ಲಿ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಸಿಂಗರಿಸಲಾಗಿದ್ದ ರಥದಲ್ಲಿ ತಂದು ಪ್ರತಿಪ್ಠಾಪಿಸಲಾಯಿತು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ರಥಕ್ಕೆ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಮಂಗಳ ವಾದ್ಯ ಹಾಗೂ ವೀರಗಾಸೆ ಕಲಾವಿದರು ಮೆರವಣಿಗೆಗೆ ಮೆರುಗು ತಂದರು. ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಭಕ್ತಸಮೂಹಕ್ಕೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.